ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಗುರುವಾರ ಡಿನ್ನರ್ ನೆಪದಲ್ಲಿ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಚಿವರಾದ ಡಾ.ಜಿ. ಪರಮೇಶ್ವರ್, ಡಾ.ಹೆಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಕೆ.ಎನ್. ರಾಜಣ್ಣ ಸಭೆಯಲ್ಲಿ ಭಾಗವಹಿಸಿದ್ದಾರೆ. ರಾತ್ರಿ 9 ಗಂಟೆಯಿಂದ 11 ಗಂಟೆಯವೆರೆಗೆ ರಹಸ್ಯವಾಗಿ ಮಾತುಕತೆ ನಡೆದಿದೆ. ಸಭೆಯಲ್ಲಿ ಹಾಜರಿದ್ದವರ ಪೈಕಿ ಸತೀಶ್ ಜಾರಕಿಹೊಳಿ, ಗೃಹ ಸಚಿವ ಪರಮೇಶ್ವರ್ ಕೂಡ ಡಿಸಿಎಂ ಸ್ಥಾನದ ರೇಸ್ ನಲ್ಲಿ ಪ್ರಮುಖವಾಗಿ ಇದ್ದಾರೆ ಎಂಬುದು ಗಮನಾರ್ಹವಾಗಿದೆ.
ಇತ್ತೀಚಿಗಷ್ಟೇ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿಮಾಡಿದ್ದ ಸತೀಶ್ ಜಾರಕಿಹೊಳಿ ಮೂರು ಡಿಸಿಎಂ ಹುದ್ದೆಯ ದಾಳ ಉರುಳಿಸಿದ್ದರು. ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಹಿಂದುಳಿದ ವರ್ಗದ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ಡಿಸಿಎಂ ಆಗಬೇಕು ಎಂದು ಚರ್ಚೆ ನಡೆಸಿದ್ದೇನೆ. ನಾನು ಡಿಸಿಎಂ ಆಗಬೇಕು ಎಂದು ಕಾರ್ಯಕರ್ತರು ಹಾಗೂ ಮಠಾಧೀಶರು ಒತ್ತಾಯಿಸುತ್ತಿರೋದನ್ನು ವರಿಷ್ಠರ ಗಮನಕ್ಕೆ ತಂದಿರೋದಾಗಿ ಹೇಳಿದ್ದರು.
ಸಹಕಾರ ಸಚಿವ ರಾಜಣ್ಣ ಕೂಡ ಬಹಿರಂಗವಾಗೇ ಹೋದಲ್ಲಿ ಬಂದಲೆಲ್ಲಾ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ಬಗ್ಗೆ ಒತ್ತಾಯಿಸುತ್ತಿದ್ದಾರೆ. ವೀರಶೈವ ಲಿಂಗಾಯತ, ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ವರ್ಗದವರಿಗೆ ಡಿಸಿಎಂ ಹುದ್ದೆ ನೀಡಬೇಕು. ಇದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಹೇಳ್ತಿದ್ದಾರೆ. ಗುರುವಾರ ತುಮಕೂರಿನಲ್ಲಿ ಮತ್ತೆ ಇದೇ ಮಾತನ್ನು ಪುನರುಚ್ಚರಿಸಿದ್ದರು.


