ಕೊರಟಗೆರೆ : ಈ ದೇಶಕ್ಕೆ ಅನ್ನ ನೀಡುವ ರೈತನ ಯಾರು ಕೂಡ ಮರೆಯಬಾರದು, ದೇಶದಲ್ಲಿ ಯಾರು ಕೂಡ ಉಪವಾಸ ಇರಬಾರದು ಎನ್ನುವ ಉದ್ದೇಶದಿಂದ ರೈತ ಬಿಸಿಲಿನಲ್ಲಿ ದುಡಿದು ನಮಗೆಲ್ಲ ಅನ್ನ ಕೊಡುತ್ತಾನೆ. ಪ್ರತಿನಿತ್ಯ ನಾವು ಅನ್ನದಾತನನ್ನ ಸ್ಮರಿಸಬೇಕಿದೆ ಎಂದು ಬೆಳ್ಳಾವಿ ಕಾರದೇಶ್ವರ ಮಠದ ಪೀಠಾಧ್ಯಕ್ಷ ಕಾರದ ವೀರಬಸವ ಮಹಾಸ್ವಾಮಿ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಹೆಚ್.ವಿ.ಪಾಳ್ಯ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಗಾಂಧಿಕೃಷಿ ವಿಜ್ಞಾನಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಹಾಗೂ ಗ್ರಾಪಂ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಕೃಷಿ ಮಂಥನ ಮತ್ತು ಬೆಳೆ ಕ್ಷೇತ್ರೋತ್ಸವ, ರೈತ ಹಾಗೂ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.
ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ ಅದರೆ ರೈತನ ಪರಿಸ್ಥಿತಿ ಯಾರು ಕೇಳೋದಿಲ್ಲ. ಇವತ್ತಿನ ಯುವ ಪೀಳಿಗೆ ಕೃಷಿಯ ಕಡೆ ಹೆಚ್ಚು ಒತ್ತು ನೀಡುವ ಸಲುವಾಗಿ ಜಿಕೆವಿಕೆ ಸೇರಿ ಗ್ರಾಮೀಣ ಭಾಗದ ರೈತರಿಗೆ ಇವತ್ತಿನ ಮಳೆಯ ಅನುಗುಣವಾಗಿ ಬೆಳೆ ಬೆಳೆಯುವುದರ ಬಗ್ಗೆ ಕಳೆದ ಮೂರು ತಿಂಗಳಿಂದ ಈ ಗ್ರಾಮ ಸೇರಿದಂತೆ ಅಕ್ಕಪಕ್ಕದ ರೈತರಿಗೆ ಸಂಪೂರ್ಣ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ನಮ್ಮ ದೇಶದ ಗಡಿ ಭಾಗವನ್ನ ಸೈನಿಕರು ರಕ್ಷಿಸಿದರೆ, ದೇಶದ ಒಳಗಿರುವ ಜೀವಗಳನ್ನ ರಕ್ಷಿಸುವ ಕೆಲಸವನ್ನ ನಮ್ಮ ರೈತರು ಮಾಡುತ್ತಿದ್ದಾರೆ. ಬೆಂಗಳೂರಿನ ಜಿಕೆವಿಕೆ ಶಾಲೆ ವಿದ್ಯಾರ್ಥಿಗಳು ನಮ್ಮ ತಾಲೂಕಿನ ಗ್ರಾಮಗಳನ್ನ ಆಯ್ಕೆ ಮಾಡಿಕೊಂಡು ಕೃಷಿಯ ಬಗ್ಗೆ ಅಧ್ಯಯನ ಮಾಡಿ ರೈತರಿಗೆ ಸಲಹೆಗಳನ್ನ ನೀಡಲಾಗುತ್ತಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಗಾಂಧಿಕೃಷಿ ವಿಜ್ಞಾನಕೇಂದ್ರ, ವಿದ್ಯಾರ್ಥಿಗಳು 14 ಗುಂಟೆಯಲ್ಲಿ 54 ಬೆಳೆಗಳನ್ನ ಬೆಳೆದು ತೋರಿಸಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಮಾತನಾಡಿ, ರೈತ ಪ್ರತಿವರ್ಷ ಮಳೆ ಬಂದಾಗ ಬೆಳೆ ಬೆಳೆಯಲು ಪ್ರಾರಂಭಿಸುತ್ತಾನೆ, ಅದರೆ ಮಧ್ಯದಲ್ಲಿ ಮಳೆ ಬರದಿದ್ದಾಗ ಅವನ ಪರಿಸ್ಥಿತಿ ಹೇಳತೀರದು, ಅದರಿಂದ ರೈತರು ಅಧುನಿಕ ಜೀವನದಲ್ಲಿ ಬೇಸಾಯದ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಲಾಭ ಪಡೆಯಬಹುದಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಗಾಂಧಿಕೃಷಿ ವಿಜ್ಞಾನಕೇಂದ್ರದ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಜನರಿಗೆ ಬೆಳೆಗಳ ಬಗ್ಗೆ ಮಾಹಿತಿ ನೀಡುತ್ತಿರವುದು ಉತ್ತಮ ಬೆಳವಣಿಗೆ ಎಂದರು.
ರೇಷ್ಮ ಕೃಷಿ ಜಿಕೆವಿಕೆ ಪ್ರಾಧ್ಯಾಪಕರಾದ ಡಾ.ಚಂದ್ರಶೇಖರ್ ಮಾತನಾಡಿ, ಬೇಸಾಯ ಮಾಡುವ ರೈತ ಯಾರ ಕೈಕೆಳಗೆ ಕೆಲಸ ಮಾಡುವ ಕೆಲಸವಲ್ಲ. ಸಮರ್ಪಕವಾಗಿ ರೈತ ಸಂರ್ಪಕ ಕೇಂದ್ರದಲ್ಲಿ ಸೂಕ್ತ ಮಾಹಿತಿ ಪಡೆದು ಬಿತ್ತನೆ ಮಾಡಿದಾಗ ಉತ್ತಮ ಫಸಲು ಬರಲು ಸಾಧ್ಯ, ರೇಷ್ಮೆ ಇಲಾಖೆಯಲ್ಲಿ ಸಾಕಷ್ಟು ಸರ್ಕಾರದ ಸವಲತ್ತು ನೀಡಲಾಗುತ್ತಿದ್ದು, ಅವುಗಳನ್ನ ಬಳಸಿಕೊಳ್ಳಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸೌಮ್ಯ ಜಗದೀಶ್, ಡಾ.ಕೃಪಾಶ್ರೀ, ಡಾ.ಮಧುಶ್ರೀ, ಸಂಪನ್ಮೂಲ ವ್ಯಕ್ತಿ ಡಾ.ಸವಿತಾ ಪಿಡಿಒ ರವಿಕುಮಾರ್, ಕೃಷಿ ಅಧಿಕಾರಿ ನಾಗರಾಜು, ರಾಮಾಂಜಿನಪ್ಪ, ಮುಖಂಡರಾದ ವೀರಣ್ಣ, ಮೂರ್ತಣ್ಣ, ಪ್ರದೀಪ್, ಕೆಂಪಣ್ಣ, ಹೆಚ್.ವಿ.ಪಾಳ್ಯ ವೀರಣ್ಣ, ಮಂಜಣ್ಣ, ಸಿದ್ದಲಿಂಗಪ್ಪ, ಕುಮಾರಣ್ಣ, ಉಮಣ್ಣ, ಲೋಕೇಶ್, ಪ್ರಸನ್ನ, ಶ್ರೀಕಂಠಪ್ಪ, ಚಂದ್ರು, ಸೇರಿದಂತೆ ಜಿಕೆವಿಕೆ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC