ಕೊರಟಗೆರೆ: ಸರ್ಕಾರದಲ್ಲಿ ಗುಂಡಿ ಮುಚ್ಚಲು ಹಣವಿಲ್ಲ. ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೀದಿ ಜಗಳ ಮಾಡುತ್ತಿದ್ದಾರೆ ಎಂದು ಶಾಸಕ ಬಿ.ಸುರೇಶ್‌ಗೌಡ ಆರೋಪಿಸಿದರು.
ತಾಲ್ಲೂಕಿನ ಮಾವತ್ತೂರು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ ಗಂಗಾರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ಪರಿಸ್ಥಿತಿ ನವೆಂಬರ್ ಕ್ರಾಂತಿ, ಡಿಸೆಂಬರ್ ಶಾಂತಿ, ಜನವರಿ ವಾಂತಿ ಎಂಬಂತಾಗಿದೆ. ಸರ್ಕಾರ ಯಾವಾಗ ಮಖಾಡೆ ಮಲಗುತ್ತದೆ ಎಂಬುದು ಗೊತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಿಂದ 150 ಸ್ಥಾನ ಗೆಲ್ಲುತ್ತೇವೆ. ಎಚ್.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ ಅವರಲ್ಲಿ ಯಾರಾದರೂ ಮುಖ್ಯಮಂತ್ರಿಯಾಗಲಿ. ಎರಡು ಪಕ್ಷದವರು ಒಟ್ಟಿಗೆ ಹೋಗುತ್ತೇವೆ. ನಾವೇ ಅಧಿಕಾರಕ್ಕೆ ಬರುತ್ತೇವೆ, ರೈತರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಜನರ ತೆರಿಗೆ ಹಣವನ್ನು ಗ್ಯಾರಂಟಿ ಹೆಸರಿನಲ್ಲಿ ಸಿಕ್ಕ ಸಿಕ್ಕವರಿಗೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನವರೇ ಸರ್ಕಾರದ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. 13 ಸಾವಿರ ಕೆಎಸ್ ಆರ್ ಟಿಸಿ ಬಸ್ ಕೆಟ್ಟು ನಿಂತಿದ್ದು, ಶಾಲೆಗೆ ಹೋಗುವ ಮಕ್ಕಳಿಗೂ ಬಸ್ ಸೌಲಭ್ಯ ಇಲ್ಲವಾಗಿದೆ ಎಂದರು.
ಜೀವನದಲ್ಲಿ ಕತ್ತಲೆ ಹೋಗಿ ಬೆಳಕು ಕೊಡು ಎಂದು ಕಾರ್ತಿಕ ಮಾಸದ ಪ್ರಯುಕ್ತ ವಿಶೇಷವಾಗಿ ದೀಪ ಹಚ್ಚಿ ಕಾರ್ಯಕ್ರಮ ನಡೆಸಲಾಗುತ್ತದೆ. ಪಂಚ ದೇವರುಗಳಿಗೆ ದೀಪೋತ್ಸವ ನೆರವೇರಿಸಲಾಗಿದೆ. ವಿಶೇಷವಾಗಿ ಗಂಗಾರತಿ ಮಾಡಲಾಗಿದೆ. ಮುಂದಿನ ವರ್ಷ ಮಾವತ್ತೂರು ಕೆರೆ ತುಂಬಿ ಕೋಡಿ ಹರಿಯಲಿ ಎಂದು ಆಶಿಸಿದರು.
ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮುಖಂಡ ಪಿ.ಎನ್.ಕೃಷ್ಣಮೂರ್ತಿ, ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಸಿ.ಲಕ್ಷ್ಮೀಶ್, ವಕ್ತಾರ ಟಿ.ಮಂಜುನಾಥ್ ಮಾತನಾಡಿದರು. ಮುಖಂಡರಾದ ಜೆ.ಎನ್.ನರಸಿಂಹರಾಜು, ರುದ್ರೇಶ್, ನೀಲೇಶ್, ಮಧುಕುಮಾರ್, ರಮೇಶ್, ನವೀನ್ ಕುಮಾರ್, ಬಿ.ಟಿ.ರಂಗಯ್ಯ, ಜಯಮ್ಮ, ನಾಗರಾಜು, ಕಂಬದ ರಂಗಯ್ಯ, ಕುಮಾರ್, ಹನಮಂತರಾಯಪ್ಪ ಇತರರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


