ಸೋಂಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಪೆಮ್ಮನಹಳ್ಳಿ ಬಳಿ ಪಿಕೋರಿಯಸ್ ಬಯೋ ಫರ್ಟಿಲೈಸರ್ಸ್ ಕಂಪನಿ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಕಂಪನಿಗೆ ನೋಟಿಸ್ ನೀಡಿ ಬೀಗ ಹಾಕಿದ್ದಾರೆ.
ಕಂಪನಿಯಿಂದ ಹೊರ ಬರುತ್ತಿರುವ ತ್ಯಾಜ್ಯದ ನೀರು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರ ದೂರು ಶಾಸಕರ ಸೂಚನೆ ಮೇರೆಗೆ, ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಒಂದು ವರ್ಷದಿಂದ ಈ ಕಂಪನಿ ರಾತ್ರಿ ವೇಳೆ ಕೋಳಿ ತ್ಯಾಜ್ಯವನ್ನು ಸಂಸ್ಕರಿಸಿ, ಮೀನಿನ ಆಹಾರ ತಯಾರಿಸುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಹೊರಬರುತ್ತಿದ್ದ ತ್ಯಾಜ್ಯದ ನೀರನ್ನು ಸಂಸ್ಕರಿಸದೆ ಹೊರಬಿಡಲಾಗುತ್ತಿತ್ತು. ಇದರಿಂದ ಪೆಮ್ಮನಹಳ್ಳಿ, ನಿಡವಂದ, ತಿಮ್ಮನಾಯಕನಹಳ್ಳಿ, ನಿಡವಂದ ಕಾಲೊನಿ ಹಾಗೂ ದಾಬಸ್ ಪೇಟೆ ಸುತ್ತಮುತ್ತ ದುರ್ವಾಸನೆ ಬೀರುತ್ತಿತ್ತು. ಜನರು ಮೂಗು ಮುಚ್ಚಿಕೊಂಡು ಓಡಾಡುವ ದುಃಸ್ಥಿತಿ ನಿರ್ಮಾಣವಾಗಿತ್ತು ಎಂದು ಇಲ್ಲಿನ ಜನರು ದೂರಿದ್ದರು.
ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಇತ್ತೀಚೆಗೆ ಕಾಮಗಾರಿ ಶಂಕುಸ್ಥಾಪನೆಗಾಗಿ ಪೆಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ತ್ಯಾಜ್ಯ ದುರ್ವಾಸನೆ ಬೀರುತ್ತಿರುವ ವಿಚಾರವನ್ನು ಅವರ ಗಮನಕ್ಕೆ ತಂದಿದ್ದರು. ಕಂಪನಿ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದ್ದರು.
ನೆಲಮಂಗಲ ತಾಲ್ಲೂಕು ಪಂಚಾಯಿತಿ ಇಒ ಮಧು, ಸೋಂಪುರ ಗ್ರಾ. ಪಂ. ಪಿಡಿಒ ರವಿಶಂಕರ್, ಪೊಲೀಸ್ ಇನ್ ಸ್ಪೆಕ್ಟರ್ ಎಸ್. ರವಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಕಂಪನಿಗೆ ಬೀಗ ಹಾಕಲಾಯಿತು.


