ಸರಗೂರು: ಹಳೆ ವೈಷಮ್ಯಕ್ಕೆ ಯುವಕನೊರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೊಳೆಯೂರು ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಗ್ರಾಮದ ರಮೇಶ್ ಆಲಿಯಾಸ್ ಕರಿಯಪ್ಪ(33) ಕೊಲೆಯಾದವ. ಈತನನ್ನು ಸ್ನೇಹಿತ ಅನುರಾಜ್ ಬಿನ್ ಪುಟ್ಟರಾಜು ಎಂಬಾತ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಜೋರಾಗಿ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅನುರಾಜ್ ನನ್ನು 24 ಗಂಟೆಯೊಳಗೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಸರಗೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ಮೊಳೆಯೂರು ಗ್ರಾಮದ ರಮೇಶ್, ಅನುರಾಜ್ ನಡುವೆ ಹಾಗಾಗ್ಗೆ ಹಳೆ ವೈಷಮ್ಯಕ್ಕೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಬುಧವಾರ ತಡರಾತ್ರಿ ಸಮೀಪದ ರಾಗಿ ಜಮೀನಿನಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗೆ ಕಾವಲು ಕಾಯುವ ಸಲುವಾಗಿ ಮರದಲ್ಲಿ ಹಟ್ಟಣೆ ಕಟ್ಟಿಕೊಂಡು ಕಾಯುವಾಗ ರಮೇಶ್ ಎಂಬಾತ ಅನುರಾಜ್ ಗೆ ಪೋನ್ ಕರೆ ಮಾಡಿದ್ದು, ಈ ನಡುವೆ ಮತ್ತೆ ಜೋರಾಗಿ ಮಾತುಕತೆ ನಡೆದಿದೆ ಎನ್ನಲಾಗಿದೆ.
ಈ ವೇಳೆ ಅನುರಾಜ್ ಹಟ್ಟಣೆಯಲ್ಲಿ ಮಲಗಿರುವಾಗ ರಮೇಶ್ ರಾತ್ರಿ 10:30ಕ್ಕೆ ಜಮೀನಿನ ಬಳಿ ಹೋಗಿ ಚಾಕುವಿನಿಂದ ಅನುರಾಜ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಅನುರಾಜ್ ಗೆ ಗಾಯವಾಗಿದ್ದು, ಎಚ್ಚರಗೊಂಡ ಅನುರಾಜ್ ರಮೇಶ್ ನ ಕೈಯಲ್ಲಿದ್ದ ಚಾಕು ಕಿತ್ತುಕೊಂಡು ರಮೇಶ್ ನ ಹೊಟ್ಟೆಗೆ ಬಲವಾಗಿ ಚುಚ್ಚಿ ಹಟ್ಟಣೆಯಿಂದ ಕೆಳಗಡೆ ನೂಕಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ರಮೇಶ್ ನಿಗೆ ರಕ್ತಸ್ರಾವವಾಗಿ ಕೆಳಗಡೆ ಬಿದ್ದು, ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಳದಂಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜು, ವೃತ್ತ ನೀರಿಕ್ಷಕ ಪ್ರಸನ್ನ, ಉಪ ನೀರಿಕ್ಷಕ ಆರ್.ಕಿರಣ್, ಸಿಬ್ಬಂದಿಗಳಾದ ಮಹಮದ್ ಇಮ್ರಾನ್, ಆನಂದ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಸರಗೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಈ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


