ಸಾಕು ನಾಯಿ ಬೊಗಳಿದ ಕಾರಣಕ್ಕೆ ನಡೆದ ಜಗಳದಲ್ಲಿ ವೃದ್ಧೆಯೊಬ್ಬಳನ್ನು ಯುವಕನೊಬ್ಬ ಒದ್ದು ಕೊಂದು ಹಾಕಿದ್ದಾನೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಯುವಕನ ಮೇಲೆ 65 ವರ್ಷದ ವೃದ್ದೆಯ ಮುದ್ದಿನ ನಾಯಿ ದಾಳಿ ಮಾಡಿದ್ದು, ಇದು ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಮುಸಖೇಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶಾಂತಿನಗರ ಮೂಲದ ಆರೋಪಿ ಅಂಗಡಿ ಮುಚ್ಚಿ ಮನೆಗೆ ಮರಳುತ್ತಿದ್ದ. ರಾತ್ರಿ 10.30ರ ಸುಮಾರಿಗೆ ನಾವು ಸಮುದಾಯ ಭವನದ ಬಳಿ ಬಂದಾಗ ನಾಯಿಯೊಂದು ನಿರಂತರವಾಗಿ ಬೊಗಳಲಾರಂಭಿಸಿದೆ. ಇದರಿಂದಾಗಿ ಆ ಮಾರ್ಗವಾಗಿ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ಕೋಪಗೊಂಡ ಆರೋಪಿ ಕಿರುಚಲು ಆರಂಭಿಸಿದ್ದಾನೆ.
ಸದ್ದು ಕೇಳಿ ನಾಯಿ ಸಾಕಿದ ವೃದ್ಧೆ ಮನೆಯಿಂದ ಹೊರ ಬಂದಳು. ನಾಯಿ ಬೊಗಳುವ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ 35 ವರ್ಷದ ಆರೋಪಿ ವೃದ್ಧೆಯ ಹೊಟ್ಟೆಗೆ ಒದ್ದಿದ್ದು, ಆಕೆ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಆಜಾದ್ ನಗರ ಪೊಲೀಸ್ ಠಾಣೆ ಪ್ರಭಾರಿ ನೀರಜ್ ಮೇಧಾ ತಿಳಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಘಟನೆಯ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


