ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರ ಒಂದೇ ಮಳೆಗೆ ಅಸ್ತವ್ಯಸ್ತವಾದ ಘಟನೆ ನಡೆದಿದ್ದು, ರಸ್ತೆಗಳ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರೆ, ಇತ್ತ ಸಾರ್ವಜನಿಕರು ಸರಿಯಾದ ಬಸ್ ತಂಗುದಾಣವಿಲ್ಲದೇ ಪರದಾಡಿದ್ದಾರೆ.
ಇತ್ತೀಚೆಗಷ್ಟೇ ಇದೇ ರಸ್ತೆಯ ಅವ್ಯವಸ್ಥೆಯ ಬಗ್ಗೆ ನಮ್ಮತುಮಕೂರು ವರದಿ ಮಾಡಿದ ಬಳಿಕ ಫೆಬ್ರವರಿ 6ರಂದು ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಆದರೆ, ರಸ್ತೆ ಡಾಂಬರೀಕರಣ ಮಾಡಿದರೂ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆಗೀಡಾಗುವಂತಾಗಿದೆ.
ಹಿರಿಯೂರು ತಾಲ್ಲೂಕಿನ ಪ್ರಮುಖ ರಸ್ತೆಗಳಾದ ಹುಳಿಯಾರು ರಸ್ತೆಯಿಂದ ಟಿ.ಬಿ ಸರ್ಕಲ್ ಮಧ್ಯ ಇರುವ ಗಾಂಧಿಸರ್ಕಲ್ ನ ಬಳಿ ಇರುವ ಅಪೋಲೋ ಮೆಡಿಕಲ್ ಬಳಿ ರಸ್ತೆಯಲ್ಲಿ ನೀರು ನಿಂತಿದ್ದು, ರಸ್ತೆ ನದಿಯಂತೆ ಕಂಡು ಬಂತು. ರಸ್ತೆಯ ಗುಂಡಿಗಳಲ್ಲಿ ನೀರು ನಿಂತಿದ್ದು, ಇದನ್ನು ಅರಿಯದೇ ವೇಗವಾಗಿ ಬರುವ ವಾಹನಗಳು ಅಪಘಾತಕ್ಕೀಡಾಗುವ ಸಾಧ್ಯತೆಗಳು ಕಂಡು ಬಂದಿದೆ. ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು.

ಹಿರಿಯೂರು ನಗರದಲ್ಲೇ ಇಂತಹ ನಿರ್ಲಕ್ಷ್ಯ ನಡೆಯುತ್ತಿರುವುದರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನನಿತ್ಯ ನೂರಾರು ಜನರು ಓಡಾಡುವ ನಗರ ಪ್ರದೇಶವೇ ಅವ್ಯವಸ್ಥೆಯ ಆಗರವಾಗಿದೆ. ಜನರು ಓಡಾಡುವ ಸ್ಥಳದಲ್ಲೇ ಮೂಲಭೂತ ಸೌಕರ್ಯಗಳನ್ನು ಒದಿಗಸಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದೇ ಮಳೆಗೆ ಹೊಸದಾಗಿ ಡಾಂಬರೀಕ್ಷಣಗೊಂಡ ರಸ್ತೆಯಲ್ಲಿ ನೀರು ನಿಂತಿದೆ. ಇದರಿಂದ ಸಾರ್ವಜನಿಕರಿಗೆ ಓಡಾಡಲು ಕೂಡ ತೊಂದರೆಯಾಗಿದೆ ಎಂದು ನಗರ ಸಭೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಇದೇ ಪ್ರದೇಶದಲ್ಲಿರುವ ಬಸ್ ನಿಲ್ದಾಣ ಸಂಪೂರ್ಣವಾಗಿ ಸೋರುತ್ತಿದ್ದು, ಹೆಸರಿಗೆ ಮಾತ್ರವೇ ಬಸ್ ತಂಗುದಾಣವಾಗಿದೆ. ಆದರೆ, ಮೇಲ್ಛಾವಣಿ ಸಂಪೂರ್ಣವಾಗಿ ಹಾನಿಗೊಂಡು ಮಳೆ ನೀರು ಬಸ್ ತಂಗುದಾಣದೊಳಗೆ ನುಗುತ್ತಿವೆ. ಬಸ್ ತಂಗುದಾಣದ ಸುತ್ತ ನೀರು ನಿಂತಿದ್ದು, ಕೊಳಚೆಯಾಗಿ ಮಾರ್ಪಟ್ಟಿದೆ.
ದಿನದಲ್ಲಿ ನೂರಾರು ಜನ ಬಂದು ಬಸ್ ಗಾಗಿ ಕಾಯುವ ಬಸ್ ತಂಗುದಾಣದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳೇ ಇಲ್ಲ ಎಂದು ಪ್ರಯಾಣಿಕರು ನಮ್ಮತುಮಕೂರು ಮಾಧ್ಯಮದ ಜೊತೆಗೆ ಅಳಲು ತೋಡಿಕೊಂಡರು. ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಇಲ್ಲ ಹೀಗಾಗಿ ನಗರದಲ್ಲೇ ಬಯಲು ಶೌಚಕ್ಕೆ ನಗರ ಸಭೆ ಪ್ರೇರಣೆ ನೀಡಿದಂತಾಗಿದೆ.
ಮಹಿಳೆಯೊಬ್ಬರು ಮಾತನಾಡುತ್ತಾ, ಬಸ್ ನಿಲ್ದಾಣದ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಳೆ ಬಂದರೆ, ಎಲ್ಲಿಯೂ ನಿಲ್ಲಲು ಸ್ಥಳವಿಲ್ಲ. ಗಂಟೆಗಳ ಕಾಲ ಕಾದರೂ ಬಸ್ ಗಳು ಬರುವುದಿಲ್ಲ. ಬಸ್ಸಿನ ಕೊರತೆ ಒಂದೆಡೆಯಾದರೆ, ಬಸ್ ತಂಗುದಾಣದ ದುಸ್ಥಿತಿ ಇನ್ನೊಂದೆಡೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಗರ ಸಭೆ ಅಧಿಕಾರಿಗಳು ತಕ್ಷಣವೇ ಹಿರಿಯೂರು ನಗರದ ಚರಂಡಿ ವ್ಯವಸ್ಥೆಗಳು, ಬಸ್ ತಂಗುದಾಣ, ರಸ್ತೆ ಮೊದಲಾದ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಬೇಕು. ಮಳೆಗಾಲ ಆರಂಭವಾಗುತ್ತಿದೆ. ಆದರೆ ಇನ್ನು ಕೂಡ ಮಳೆಗಾಲವನ್ನು ನಿಭಾಯಿಸಲು ನಗರ ಸಭೆ ಸಿದ್ಧವಾಗಿಲ್ಲ ಎನ್ನುವುದಕ್ಕೆ ಈ ಘಟನೆಯೇ ನಿದರ್ಶನ. ಏನಾದರೂ ಅನಾಹುಗಳು ನಡೆಯುವ ಮುನ್ನವೇ ನಗರ ಸಭೆ ಎಚ್ಚೆತ್ತುಕೊಂಡು ಜನ ಸ್ನೇಹಿ ಕೆಲಸಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


