ಕೃಷ್ಣರಾಜಪೇಟೆ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಜನರು ಗೃಹ ನಿರ್ಮಾಣ ಸಹಕಾರ ಸಂಘದಲ್ಲಿಯೇ ತಮ್ಮ ಉಳಿತಾಯ ಖಾತೆಗಳನ್ನು ತೆರೆದು ವ್ಯವಹರಿಸುವ ಜೊತೆಗೆ ಶೇರುದಾರರಾಗಿ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಂಘದ ಅಧ್ಯಕ್ಷ ಡಾ. ಬಸ್ತಿ ರಂಗಪ್ಪ ಮನವಿ ಮಾಡಿದರು.
ಅವರು ಕೃಷ್ಣರಾಜಪೇಟೆ ಪಟ್ಟಣದ ದಲಿತ ಶಿಕ್ಷಣ ಅಭಿವೃದ್ದಿ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷ್ಣರಾಜಪೇಟೆ ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತದ 2023–24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ದಿನಮಾನದಲ್ಲಿ ಎಲ್ಲರೂ ಒಂದು ಸ್ವಂತ ಸೂರನ್ನು ಹೊಂದಬೇಕು ಎನ್ನುವುದು ನಮ್ಮ ಜೀವಿತದ ಜೀವಮಾನದ ಕೊನೆಯ ಆಸೆಯಾಗಿದೆ. ಈ ಕನಸನ್ನು ಸಾಕಾರ ಮಾಡುವ ದಿಕ್ಕಿನಲ್ಲಿ ದೃಢವಾದ ಹೆಜ್ಜೆ ಹಾಕಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಗೃಹ ನಿರ್ಮಾಣ ಸಹಕಾರ ಸಂಘವು ಕೃಷ್ಣರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಒಂದುವರೆ ಎಕರೆ ಕೃಷಿ ಜಮೀನನ್ನು ಖರೀದಿಸಿ ಭೂ ಪರಿವರ್ತನೆ ಮಾಡಿ, ಲೇಔಟ್ ನಿರ್ಮಾಣ ಮಾಡಿ ನಿವೇಶನಗಳನ್ನಾಗಿ ವಿಂಗಡಿಸಿ, ಮಧ್ಯಮ ವರ್ಗದ ಜನರು ಹಾಗೂ ಶ್ರೀಸಾಮಾನ್ಯರ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ವಿತರಣೆ ಮಾಡಲು ನಮ್ಮ ಆಡಳಿತ ಮಂಡಳಿಯು ದೃಢವಾದ ತೀರ್ಮಾನವನ್ನು ಕೈಗೊಂಡು ಕಾರ್ಯೋನ್ಮುಖವಾಗಿದೆ. ಆದ್ದರಿಂದ ನಿವೇಶನವನ್ನು ಹೊಂದಬೇಕೆಂಬ ಸಂಘದ ಸದಸ್ಯರು ಮೂರು ಲಕ್ಷ ರೂಗಳ ಮೊದಲ ಕಂತನ್ನು ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ನಿಗದಿಪಡಿಸುವ ದರವನ್ನು ಅಂತಿಮವಾಗಿ ನಿವೇಶನಕ್ಕೆ ಇಡಲಾಗುತ್ತದೆ. ಸಂಘದ ಸದಸ್ಯರು ಹಾಗೂ ಷೇರುದಾರರು ನಿವೇಶನವನ್ನು ಪಡೆದುಕೊಳ್ಳಲು ಮುಂಗಡವಾಗಿ ಹಣವನ್ನು ಪಾವತಿಸುವ ಜೊತೆಗೆ ನಮ್ಮ ಸಂಘದ ಬ್ಯಾಂಕಿಂಗ್ ಶಾಖೆಯಲ್ಲಿ ಉಳಿತಾಯ ಖಾತೆಗಳನ್ನು ತೆರೆದು ವ್ಯವಹಾರ ಮಾಡುವ ಮೂಲಕ ಸಂಘದ ಮುನ್ನಡೆಗೆ ಕಾರಣರಾಗಬೇಕು ಎಂದು ಬಸ್ತಿ ರಂಗಪ್ಪ ಮನವಿ ಮಾಡಿದರು.
ಕಾರ್ಯನಿರ್ವಾಹಕ ಮಂಡಳಿಯ ಕಾರ್ಯದರ್ಶಿ ಚೆಲುವಯ್ಯ ಅವರು ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ನಡಾವಳಿಗಳನ್ನು ಓದಿ ರೆಕಾರ್ಡ್ ಮಾಡಿ ಸಂಘದ ಜಮಾ ಖರ್ಚು, ಲಾಭ ನಷ್ಟ, ಆಸ್ತಿ ಜವಾಬ್ದಾರಿ ತಕ್ತೆಗಳು ಹಾಗೂ ಆಡಿಟ್ ವರದಿಯನ್ನು ಓದಿ ಸಭೆಯ ಒಪ್ಪಿಗೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ 2024-25 ನೇ ಸಾಲಿನ ಅಂದಾಜು ಬಜೆಟ್ ಅನ್ನು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಯಿತು.
ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷರಾದ ಹೆಚ್ ಪುಟ್ಟರಾಜು ನಿರ್ದೇಶಕರಾದ ಕೆ. ನಂಜಪ್ಪ, ಹೆಚ್.ಕೃಷ್ಣ ರಾಮದಾಸ್, ಪರಶಿವಮೂರ್ತಿ ಎ.ಎಸ್.ಜಯಣ್ಣ, ಸಿಂದಘಟ್ಟ ಪುಟ್ಟರಾಜು, ಎಸ್.ಶಿವರಾಮು ಮರಿಯಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಸೋಮ ಸುಂದರ್, ಬಲರಾಮ, ಲೋಕೇಶ್ವರಿ ಸರಸ್ವತಮ್ಮ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದರು.
ವರದಿ: ಮಂಜು ಶ್ರವಣೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q