ತುಮಕೂರು: ಡಿಜಿಟಲ್ ಮಾಧ್ಯಮಕ್ರಾಂತಿಯ ಕಾಲ ಇದಾಗಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಮಾಧ್ಯಮ ಕುರಿತ ಸಂಶೋಧನೆಗೆ ವಿಫುಲ ಅವಕಾಶವಿದೆ ಎಂದು ಅಮೇರಿಕದ ಕೊಲರಾಡೊ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕಿ ವೈಭವಿಕೃಷ್ಣ ಜಿ.ಎ. ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ವಿದೇಶದಲ್ಲಿ ಸಂಶೋಧನೆ ಮತ್ತು ಉದ್ಯೋಗಾವಕಾಶಗಳು’ ಕುರಿತು ಮಾತನಾಡಿದ ಅವರು, ಮಾಧ್ಯಮ ಸಂಶೋಧನೆ ಒಂದು ವಿಸ್ತೃತ ಕ್ಷೇತ್ರವಾಗಿದ್ದುಅದು ಸೀಮಾತೀತವಾಗಿದೆ ಎಂದರು.
ಅಮೇರಿಕದಂತಹ ದೇಶಗಳ ವಿವಿಗಳಿಗೆ ವಿವಿಧ ದೇಶಗಳಿಂದ ಸಂಶೋಧಕರು ಬರುವುದರಿಂದ ಸಹಭಾಗಿತ್ವದ ಸಂಶೋಧನ ಯೋಜನೆಗಳು ಹೆಚ್ಚಾಗಿರುತ್ತವೆ. ಇದರಿಂದ ಒಂದೇ ವಿಷಯದ ಕುರಿತ ವಿಭಿನ್ನ ದೃಷ್ಟಿಕೋನಗಳು ಗೊತ್ತಾಗುತ್ತವೆ ಎಂದರು.
ವಿದೇಶದಲ್ಲಿ ವ್ಯಾಸಂಗ ಹಾಗೂ ಸಂಶೋಧನೆ ಜತೆಜತೆಗೆ ಉದ್ಯೋಗ ಮಾಡುವುದಕ್ಕೂ ಸಾಕಷ್ಟು ಅವಕಾಶವಿದೆ. ಸಂಶೋಧನ ಸಹಾಯಕರೂ ಉತ್ತಮ ಸಂಭಾವನೆ ಪಡೆಯಬಲ್ಲರು. ಆದರೆ ಸರಿಯಾದ ವಿಶ್ವವಿದ್ಯಾನಿಲಯ ಹಾಗೂ ಮಾರ್ಗದರ್ಶಕರ ಆಯ್ಕೆ ಬಹಳ ಮುಖ್ಯಎಂದರು.
ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧಕರು ಬೋಧನೆಯಲ್ಲಿ ತೊಡಗಿಸಿಕೊಳ್ಳುವುದು ಅಪೇಕ್ಷಣೀಯ. ಇದು ಅವರ ಸಂಶೋಧನ ಫಲಿತಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಸಹಕಾರಿಯಾಗುವುದರೊಂದಿಗೆ ಸಂಶೋಧನೆ ಕುರಿತು ಹೆಚ್ಚಿನ ಸ್ಪಷ್ಟತೆಯೂ ದೊರೆಯುತ್ತದೆ ಎಂದರು.
ಅಮೇರಿಕದ ವಿವಿಗಳಲ್ಲಿ ಗ್ರಂಥಾಲಯಕ್ಕೆ ಮಹತ್ವದ ಸ್ಥಾನವಿದೆ. ಅಲ್ಲಿನ ಯಾವುದೇ ವಿಭಾಗಗಳಿಗಿಂತ ಗ್ರಂಥಾಲಯವೇ ದೊಡ್ಡದಾಗಿರುತ್ತದೆ. ಉತ್ತಮ ಸಂಶೋಧಕರಾಗಿ ರೂಪುಗೊಳ್ಳಲು ವಿಸ್ತೃತ ಅಧ್ಯಯನದ ಅವಶ್ಯಕತೆಯಿದೆ ಎಂದರು.
ವಿದೇಶದಲ್ಲಿ ಸಂಶೋಧನೆ ಮಾಡುವುದಕ್ಕೆ ಮೂಲಪ್ರೇರಣೆ ನನಗೆ ತುಮಕೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ದೊರೆಯಿತು. ವಿವಿಗೆ ನಾನು ಸದಾಋಣಿಯಾಗಿರುತ್ತೇನೆ ಎಂದರು. ವಿಭಾಗದ ಸಂಯೋಜ ಕಡಾ.ಸಿಬಂತಿ ಪದ್ಮನಾಭ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕರಾದ ಡಾ.ಪೃಥ್ವಿರಾಜ ಟಿ., ವಿನಯ್ ಕುಮಾರ್ ಎಸ್.ಎಸ್., ಡಾ.ಜಿ.ಗಿರಿಜಮ್ಮ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx