ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರದ ಆಗಸ್ಟ್ 5, 2019 ರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರ ಪೀಠವು ಸೋಮವಾರ ತೀರ್ಪು ಪ್ರಕಟಿಸಿತು. ಅವರು 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರ ‘ದುರುದ್ದೇಶಪೂರಿತ’ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯ ನಿಬಂಧನೆಗಳನ್ನು ಕೇಂದ್ರವು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 23 ಅರ್ಜಿಗಳ ಮೇಲೆ ಐವರು ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು ತನ್ನ ಮಹತ್ವದ ತೀರ್ಪನ್ನು ಇಂದು ಪ್ರಕಟಿಸಿತು.
ರಾಷ್ಟ್ರಪತಿ ಆಳ್ವಿಕೆ ಸಮಯದಲ್ಲಿ ಕೇಂದ್ರದಿಂದ ಯಾವುದೇ ಬದಲಾಯಿಸಲಾಗದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದವನ್ನೂ ಈ ಸಂದರ್ಭದಲ್ಲಿ ಸಿಜೆಐ ತಿರಸ್ಕರಿಸಿದರು.
ರಾಷ್ಟ್ರಪತಿ ಆಳ್ವಿಕೆ ಸಂದರ್ಭದಲ್ಲಿ ರಾಜ್ಯದ ಪರವಾಗಿ ಕೇಂದ್ರವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸಿಜೆಐ ಚಂದ್ರಚೂಡ್ ತಮ್ಮ ತೀರ್ಪನ್ನು ಓದುವಾಗ ಹೇಳಿದರು.
ಆದಷ್ಟು ಬೇಗ ಚುನಾವಣೆ ನಡೆಸುವಂತೆ ಭಾರತದ ಚುನಾವಣಾ ಆಯೋಗಕ್ಕೆ ಇದೇ ಸಂದರ್ಭದಲ್ಲಿ ಸಿಜೆಐ ಆದೇಶಿಸಿದರು. ಸೆಪ್ಟೆಂಬರ್ 30 ರೊಳಗೆ ಜಮ್ಮು-ಕಾಶ್ಮೀರ ಅಸೆಂಬ್ಲಿಗೆ ಚುನಾವಣೆಗಳನ್ನು ನಡೆಸಲು ಭಾರತದ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ರಾಜ್ಯತ್ವದ ಮರುಸ್ಥಾಪನೆಯು ಸಾಧ್ಯವಾದಷ್ಟು ಬೇಗ ನಡೆಯಬೇಕು ಎಂದರು.


