ತುಮಕೂರು: ಸ್ವಾತಂತ್ರ್ಯದ ನಂತರ ಭಾರತವು ಸ್ವಾವಲಂಬನೆಯನ್ನು ಕಂಡುಕೊಂಡಿದ್ದು, ವಿಶ್ವದ 5ನೇ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸಿದ್ಧಗಂಗಾ ಮಠದ ಆವರಣದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣಾ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ಬಳಿಕ ಬಡತನ ರೇಖೆಯಲ್ಲಿ ಗುರುತಿಸಿಕೊಂಡು, ಭಾರತವು ಅಭಿವೃದ್ಧಿಯತ್ತ ಸಾಗುವುದಿಲ್ಲ ಎಂದು ಹಲವು ದೇಶಗಳು ಭಾವಿಸಿದ್ದವು. ಕಳೆದ 77 ವರ್ಷಗಳಲ್ಲಿ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು 5ನೇ ಆರ್ಥಿಕ ದೇಶವಾಗಿ ಬೆಳೆದು ನಿಂತಿದೆ. ವಿದೇಶದಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ನಾವು, ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ವಿಶ್ವಕ್ಕೆ ತಾಂತ್ರಿಕ ಸಂಪನ್ಮೂಲ ಕಲ್ಪಿಸುವ ಶಕ್ತಿ ಗಳಿಸಿರುವ ಭಾರತವು ಬಲಿಷ್ಠ ದೇಶವಾಗಿದೆ ಎಂದು ಹೇಳಿದರು.
ಚಂದ್ರನ ಬಳಿ ಹೋಗುವ ಸಾಧನೆಯನ್ನು ಮಾಡಿದ್ದೇವೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಂತಹ ಆಶಯಗಳನ್ನು ಈಡೇರಿಸಲು ಇನ್ನು ಸಾಧ್ಯವಾಗಿಲ್ಲವೇನು ಎಂದು ಅನ್ನಿಸುತ್ತಿದೆ. ಪ್ರತಿಯೊಬ್ಬರಿಗೂ ಸಮಾನತೆ, ಸ್ವಾತಂತ್ರ್ಯ ಹಕ್ಕುಗಳನ್ನು ನೀಡಬೇಕೆಂದು ಪೂರ್ವಪೀಠಿಕೆಯಲ್ಲಿ ಬರೆದಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ನಾವು ಬಹು ದೂರ ಸಾಗಬೇಕಿದೆ ಎಂದರು.
ಸಿದ್ಧಾಗಂಗಾ ಮಠವು ಲಕ್ಷಾಂತರ ಕ್ರಿಯಾಶಿಲ ವಿದ್ಯಾರ್ಥಿಗಳನ್ನು ನೀಡಿದೆ. ಸಾವಿರಾರು ಸಂಖ್ಯೆಯಲ್ಲಿ ಇಂಜಿನಿಯರ್, ವಿಜ್ಞಾನಿಗಳು ವಿಶ್ವದೆಲ್ಲೆದೆಡೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಿದ್ದಗಂಗಾ ಮಠವು ಕೈಗೊಂಡ ಅನ್ನ ದಾಸೋಹ, ಅಕ್ಷರ ದಾಸೋಹದ ಕಾರ್ಯಕ್ರಮವನ್ನು ವಿಶ್ವದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೇರೆ ಯಾರಿಂದಲೂ ಮಾಡಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ರವರು ದಿವ್ಯ ಸಾನಿಧ್ಯ ವಹಿಸಿದ್ದರು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಸಿಇಒ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಕೆ.ವಿ, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜಾ ಅವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q