ಔರಾದ: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಎರಡು ವರ್ಷದಿಂದ ಅಂಕಪಟ್ಟಿಗಾಗಿ ಪರದಾಡಿದರು ಸ್ಪಂದಿಸದ ಶಾಸಕ ಪ್ರಭು ಚವ್ಹಾಣ, ಈಗ ನಾನು ಅಂಕಪಟ್ಟಿ ತಂದಿರುವದಾಗಿ ಹೇಳಿದ್ದಾರೆ ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಡಿ.ಕೆ.ಚಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಅಂಕಪಟ್ಟಿ ಪಡೆದ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಶಾಸಕ ಪ್ರಭು ಚವ್ಹಾಣ ನಡೆಯನ್ನು ಪ್ರಶ್ನಿಸಿದರಲ್ಲದೇ, ಕಳೆದ ಎರಡು ವರ್ಷದಿಂದ ಶಾಸಕ ಪ್ರಭು ಚವ್ಹಾಣ ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಬಂದಿಲ್ಲ. ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಹಾಗೂ ಎಬಿವಿಪಿ ಕಾರ್ಯಕರ್ತರು ಸೇರಿದಂತೆ ವಿದ್ಯಾರ್ಥಿಗಳು ರಸ್ತೆಗಿಳಿದು ಹೋರಾಟ ಮಾಡಿದ್ದಾರೆ. ಆದರೆ ಕ್ಯಾರೆ ಎನ್ನದೆ ಪ್ರಭು ಚವ್ಹಾಣ ಸಂಘಟನೆಗಳ ಹೋರಾಟದಿಂದ ಅಂಕಪಟ್ಟಿ ಬಂದಿವೆ ಎನ್ನುವದಿಲ್ಲ. ಬದಲಿಗಾಗಿ ನನ್ನಿಂದ ಅಂಕಪಟ್ಟಿ ಬಂದಿದೆ ಎಂದಿದ್ದಾರೆ ಎಂದು ದೂರಿದರು.
ಕಾಲೇಜಿನ ಪ್ರಾಂಶುಪಾಲ ಅಂಬಿಕಾದೇವಿ ಕೋತಮಿರ್, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಪ್ರಾಂಶುಪಾಲರ ವಿರುದ್ಧ ಸದ್ಯದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರಿಗೆ ದೂರು ಸಲ್ಲಿಸಲಾಗುತ್ತದೆ ಎಂದರು.
ಶಾಸಕ ಪ್ರಭು ಚವ್ಹಾಣ ಅಂಕಪಟ್ಟಿಗಾಗಿ ಯಾವುದೇ ಪ್ರಯತ್ನ ಮಾಡದೇ ಅಂಕಪಟ್ಟಿ ಬಂದಾಗ ಕಾಲೇಜಿನಲ್ಲಿ ಸಮಾರಂಭ ಮಾಡಿಸಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವ ಮೂಲಕ ಪ್ರಚಾರ ಮಾಡಿಕೊಂಡಿದ್ದಾರೆ ಹೊರತು ಅವರು ವಿದ್ಯಾರ್ಥಿಗಳಿಗೆ ಸ್ಪಂದಿಸಿಲ್ಲ. ಶಾಸಕ ಪ್ರಭು ಚವ್ಹಾಣ ಅವರ ನಿರ್ಲಕ್ಷ್ಯತನದಿಂದ ವಿದ್ಯಾರ್ಥಿಗಳು ಎರಡು ವರ್ಷ ಮುಂದಿನ ಶಿಕ್ಷಣ ಪಡೆಯುವಲ್ಲಿ ವಂಚಿತರಾಗಿದ್ದಾರೆ ಎಂದರು.
ಪದವಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅಂಕಪಟ್ಟಿ ನೀಡದೇ, ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಧೋರಣೆ ಖಂಡಿಸಿ ನಾನಾ ಸಂಘಟನೆಗಳು ಧ್ವನಿ ಎತ್ತಿವೆ. ಅಲ್ಲದೇ ವಿದ್ಯಾರ್ಥಿಗಳು ರಸ್ತೆಗಿಳಿದು ಹೋರಾಟ ಮಾಡಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ್ದು, ಸಂಘಟನೆಗಳೇ ಹೊರತು ಶಾಸಕ ಪ್ರಭು ಚವ್ಹಾಣ ಅಲ್ಲ. ಆದರೆ ಮಾಧ್ಯಮದಲ್ಲಿ ನಾನೇ ಅಂಕಪಟ್ಟಿ ತರಿಸಿದ್ದೇನೆ ಎಂದಿದ್ದು, ಸರಿಯಲ್ಲ. ಕಾಲೇಜಿನ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಯಾರಿಂದ ಬಂದಿವೆ ಎಂಬುವುದು ಗೊತ್ತಿದೆ ಎಂದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW