ತುಮಕೂರು: ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವರ ಮೇಲೆ ಹೆಜ್ಜೇನುಗಳು ದಾಳಿ ಮಾಡಿದ ಪರಿಣಾಮ ಓರ್ವ ಮೃತಪಟ್ಟು, 25ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ನಡೆದಿದೆ.
ನಾಮಕರಣ ಕಾರ್ಯಕ್ರಮವನ್ನು ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ದಿಢೀರನೆ ದಾಳಿ ನಡೆಸಿದ ಹೆಜ್ಜೇನು ದಾಳಿ ಮಾಡಿವೆ.47 ವರ್ಷದ ವೀರಭದ್ರಯ್ಯ ಎಂಬುವರು ಹೆಜ್ಜೇನು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹೆಜ್ಜೇನು ದಾಳಿಯಾದವರಿಗೆ ಗುಬ್ಬಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಮಕರಣ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸಮೀಪದಲ್ಲಿಯೇ ಮರದಲ್ಲಿದ್ದ ಹೆಜ್ಜೇನುಗಳು ಸಮೀಪ ಬರುತ್ತಿದ್ದಂತೆ ಜನರು ದೇವಸ್ಥಾನದ ಒಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡಿದ್ದರು. ನಂತರ ನಾಮಕರಣ ಕಾರ್ಯಕ್ರಮಕ್ಕೆಂದು ಬಂದಿದ್ದ ಶಿವಣ್ಣ ಎಂಬವರು ಹೊರಗಡೆ ಜನರು ಯಾರು ಇಲ್ಲದ್ದನ್ನು ಗಮನಿಸಿದ್ದಾರೆ. ಆಗ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ದೇವಸ್ಥಾನದ ಒಳಗೆ ಸೇರಿಕೊಂಡಿದ್ದವರು ದೇಗುಲದ ಹೊರಗೆ ಜೇನುನೊಣಗಳು ಇರುವುದನ್ನು ತಿಳಿಸಿದ್ದಾರೆ. ಅಲ್ಲದೆ ತಕ್ಷಣ ದೇಗುಲದ ಒಳಗೆ ಬರುವಂತೆ ಶಿವಣ್ಣ ಅವರಿಗೂ ಕೂಡ ಹೇಳಿದ್ದಾರೆ. ಶಿವಣ್ಣ ಅವರು ಸಹ ದೇವಸ್ಥಾನದ ಒಳಗೆ ಹೋಗಿ ಸುಮಾರು ಒಂದು ಗಂಟೆ ಕಾಲ ಕಳೆದ ನಂತರ ದೇಗುಲದ ಒಳಗೆ ಅವಿತುಕೊಂಡಿದ್ದ ಜನರು ಹೊರಗಡೆ ಜೇನುನೊಣಗಳು ಹೋಗಿರಬಹುದೆಂದು ಹೊರಗೆ ಬಂದಿದ್ದಾರೆ. ಆದರೆ ಅಲ್ಲಿಯೇ ಓಡಾಡುತ್ತಿದ್ದ ಜೇನುನೊಣಗಳು ಜನರನ್ನು ಕಂಡ ಕೂಡಲೇ ಮತ್ತೊಮ್ಮೆ ದಾಳಿ ನಡೆಸಿವೆ. ಇದರಿಂದಾಗಿ ಜನರು ಗಂಭೀರವಾಗಿ ಗಾಯಗೊಂಡು ಚೆಲ್ಲಾಪಿಲ್ಲಿ ಆಗಿ ಓಡಿ ಹೋಗಿದ್ದಾರೆ.
ದೇವಸ್ಥಾನದ ಸಮೀಪ ಇದ್ದ ಮರದಲ್ಲಿ ಸುಮಾರು ನಾಲ್ಕು ಜೇನುಗೂಡುಗಳಿದ್ದು ದೇವಸ್ಥಾನಕ್ಕೆ ಬರುವ ಜನರ ಮೇಲೆ ದಾಳಿ ಮಾಡುವುದು ಸರ್ವೇಸಾಮಾನ್ಯವಾಗಿದೆ.


