ತುಮಕೂರು: ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ಅವರ ಮುಸುಕಿನ ಗುದ್ದಾಟ ಮತ್ತೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ನವ ಸಂಕಲ್ಪದಲ್ಲೇ ಹಳೆಯ ಬಿರುಕು ಮತ್ತೆ ಗೋಚರವಾಗಿದೆ.
ಡಾ.ಜಿ.ಪರಮೇಶ್ವರ ಅಧ್ಯಕ್ಷಯಲ್ಲಿ ನಡೆಯುತ್ತಿದ್ದ ನವ ಸಂಕಲ್ಪ ಶಿಬಿರ ಪರಮೇಶ್ವರ ಒಡೆತನದ ಗಂಗಾಧರಯ್ಯ ಮೆಮೊರಿಯಲ್ ಹಾಲ್ ನಲ್ಲಿ ನಡೆಯಿತು. ಈ ವೇಳೆ ಕೆ.ಎನ್.ರಾಜಣ್ಣ ವೇದಿಕೆ ಹತ್ತದೇ ಇರುವುದು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿತು. ಇದೇ ವೇಳೆ ಕಾರ್ಯಕರ್ತರ ಕೂಗು, ಮುಖಂಡರ ಒತ್ತಾಯದ ಮೇರೆಗೆ ಕೆ.ಎನ್.ರಾಜಣ್ಣ ವೇದಿಕೆ ಹತ್ತಿದರು. ಆದರೆ ಕಾರ್ಯಕ್ರಮದಲ್ಲಿ ಅವರು ಮಾತನಾಡದೇ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ನಾನು ಜಿಲ್ಲಾ ಕಾಂಗ್ರೆಸ್ ನಲ್ಲಿ ಅಪರಾಧಿ. ಹಾಗಾಗಿ ವೇದಿಕೆಗೆ ಹೋಗಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ , ಜಿ.ಪರಮೇಶ್ವರ ಆಪ್ತ ರಾಮಕೃಷ್ಣ ನನ್ನ ವಿರುದ್ದ ದೂರು ಕೊಟ್ಟಿದ್ದಾರೆ. ಆತ ಪಿರ್ಯಾದುದಾರ. ನಾನು ಅಪರಾಧಿ. ಆತ ವೇದಿಕೆ ಮೇಲೆ ಇರುವಾಗ ನಾನು ವೇದಿಕೆ ಹತ್ತಿಲ್ಲ ಎಂದು ರಾಜಣ್ಣ ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದರು.
2019ರಲ್ಲಿ ಜಿ.ಪರಮೇಶ್ವರ ಹಟಾವೋ…ಕಾಂಗ್ರೆಸ್ ಬಚಾವೋ ಎಂದು ಪೋಸ್ಟರ್ ಅಳವಡಿಸಲಾಗಿತ್ತು. ಹಾಗಾಗಿ ಕೆ.ಎನ್.ರಾಜಣ್ಣ ಹಾಗೂ ಅವರ ಪುತ್ರ ಪರಿಷತ್ ಸದಸ್ಯ ರಾಜೇಂದ್ರ ವಿರುದ್ದ ದೂರು ನೀಡಲಾಗಿತ್ತು. ಈ ದೂರಿನ ಚಾರ್ಜ್ ಶೀಟ್ ಕೋರ್ಟ್ ಗೆ ಸಲ್ಲಿಕೆಯಾಗಿದೆ. ಇದರಿಂದ ಅಸಮಾಧಾನ ಗೊಂಡ ಕೆ.ಎನ್. ರಾಜಣ್ಣ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಇದ್ದ ವೇದಿಕೆಯನ್ನೇ ಹತ್ತದೇ ತಮ್ಮ ಅಸಮಾಧಾನ ಹೊರ ಹಾಕಿದರು.
ಇನ್ನೂ ನವ ಸಂಕಲ್ಪಗೆ ಶಿಬಿರಕ್ಕೆ ಸಿದ್ದರಾಮಯ್ಯನವರು ಬರಬೇಕಿತ್ತು. ಆದರೆ, ಬೇರೆ ಕಾರ್ಯಕ್ರಮದ ನೆಪದಲ್ಲಿ ಸಿದ್ದರಾಮಯ್ಯ ಕೂಡ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು, ನವ ಸಂಕಲ್ಪದಲ್ಲೇ ಕಾಂಗ್ರೆಸ್ ನಾಯಕರೊಳಗಿನ ಬಿರುಕು ಕಂಡು ಬಂದಿರುವುದು ಕಾರ್ಯಕರ್ತರನ್ನು ಗೊಂದಲಕ್ಕೆ ನೂಕಿದೆ.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz