ಕೆ.ಆರ್.ಪೇಟೆ: ದ್ವಿತೀಯ ಪಿಯುಸಿ ವ್ಯಾಸಂಗವು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮುಂಬರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಹಬ್ಬದಂತೆ ಎದುರಿಸಿ ಸರ್ವಶ್ರೇಷ್ಠ ಸಾಧನೆ ಮಾಡಬೇಕು ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ಶಾರದಾ ಪೂಜಾ ಸಮಾರಂಭದಲ್ಲಿ ಭಾಗವಹಿಸಿದ್ದ ಸಚಿವ ಡಾ.ನಾರಾಯಣಗೌಡ ಮಾತನಾಡಿದರು.
ಯುವಶಕ್ತಿ ಬಲಿಷ್ಠ ಶಕ್ತಿಯಾಗಿದೆ. ಯುವಜನರು ಏಕಾಗ್ರತೆ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದರೆ ಯಾವುದೇ ಕೆಲಸವನ್ನು ಮಾಡಿ ಗುರಿಯನ್ನು ತಲುಪಬಹುದಾಗಿದೆ. ಆದ್ದರಿಂದ ತಾವುಗಳು ತರಗತಿಗಳಲ್ಲಿ ಕಲಿತ ಪಾಠಪ್ರವಚನಗಳನ್ನು ನೆನಪು ಮಾಡಿಕೊಂಡು ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಚೆನ್ನಾಗಿ ಓದಿ ಪ್ರಶ್ನೆಗೆ ಸರಿಯಾದ ನಿಖರ ಉತ್ತರವನ್ನು ಬರೆಯಬೇಕು. ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಸಾಧನೆ ಮಾಡಲು ಧೃಡವಾದ ಸಂಕಲ್ಪವನ್ನು ಮಾಡಿ ತಲೆ ಬಗ್ಗಿಸಿ ಪುಸ್ತಕಗಳನ್ನು ಓದಿ ಮನನ ಮಾಡಿಕೊಂಡರೆ. ಮುಂದೆ ಜೀವನದಲ್ಲಿ ತಲೆ ಎತ್ತಿ ಬದುಕು ನಡೆಸಬಹುದಾಗಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆಗಳು ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಒತ್ತು ನೀಡಿ ಗುಣಮಟ್ಟದ ಶಿಕ್ಷಣ ನೀಡಿ ಮುನ್ನಡೆಸುತ್ತಿವೆ ಎಂದು ಅಭಿಮಾನದಿಂದ ಸ್ಮರಿಸಿ ಜಗದ್ಗುರು ಭೈರವೈಕ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಶಿಕ್ಷಣ, ವಸತಿ ಹಾಗೂ ದಾಸೋಹಕ್ಕೆ ನೀಡಿರುವ ಕೊಡುಗೆಯನ್ನು ಕೊಂಡಾಡಿದರು.
ಆದಿಚುಂಚನಗಿರಿಯ ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಿಜಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಶೇ.100ಕ್ಕೆ 100ರಷ್ಟು ಫಲಿತಾಂಶವನ್ನು ತಂದುಕೊಡುವ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ. ಈ ಸಾಲಿನಲ್ಲಿಯೂ ವಿದ್ಯಾರ್ಥಿಗಳು ಸರ್ವಶ್ರೇಷ್ಠ ಸಾಧನೆ ಮಾಡಿ ಬಿಜಿಎಸ್ ಕಾಲೇಜಿನ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಬೆಳಗಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದೇಗೌಡ, ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಆರ್.ನೀಲಕಂಠ, ಸಚಿವರ ಆಪ್ತಸಹಾಯಕರಾದ ಸಾರಂಗಿ ಮಂಜುನಾಥಗೌಡ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಬಂದೇನವಾಜ ಅ ನದಾಫ ನ್ಯೂಸ್ ಬಾಗಲಕೋಟೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


