ನರಸೀಪುರ: ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಪಟ್ಟಣದ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ತಾಲ್ಲೂಕಿನ ಅಕ್ಕೂರು ಗ್ರಾಮದ ಕೆಂಪರಾಜು ಎಂಬುವರ ಪುತ್ರಿ ಅನುಶ್ರೀ(16) ಎಂಬಾಕೆಯೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಬಂದು ಸಾವನ್ನಪ್ಪಿದ ವಿದ್ಯಾರ್ಥಿನಿ.
ತಾಲ್ಲೂಕಿನ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದ ಅನುಶ್ರೀ ಇಂದು ಪಟ್ಟಣದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದಳು.
ತಾನು ಪರೀಕ್ಷೆ ಬರೆಯಬೇಕಾಗಿದ್ದ ಕೇಂದ್ರಕ್ಕೆ ಹಾಜರಾಗಬೇಕಾದ ಆಕೆ ಗೊಂದಲ ಮಾಡಿಕೊಂಡು ಪಕ್ಕದಲ್ಲೇ ಇದ್ದ ಶಿವಾನಂದ ಶರ್ಮ ಆಂಗ್ಲ ಮಾಧ್ಯಮ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಮುಂದಾಗಿ ಸುಮಾರು ಹದಿನೈದು ನಿಮಿಷಗಳ ಕಾಲ ಪರೀಕ್ಷೆ ಬರೆದಿದ್ದಳು ಎನ್ನಲಾಗಿದೆ.
ಆದರೆ ಆಕೆ ಕುಳಿತು ಪರೀಕ್ಷೆ ಬರೆಯುತ್ತಿದ್ದ ಹಾಲ್ ಟಿಕೆಟ್ ನಂಬರ್ ವಿದ್ಯಾರ್ಥಿಯೊಬ್ಬರದ್ದಾಗಿದ್ದು, ಇದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರು ಆಕೆಗೆ ಮನವರಿಕೆ ಮಾಡಿ ಪಕ್ಕದ ಸೆಂಟರ್ ಕರೆದೊಯ್ಯುತ್ತಿದ್ದ ಸಂಧರ್ಭ ಶಾಲೆಯ ಮೆಟ್ಟಿಲನ್ನು ಹತ್ತುವ ವೇಳೆ ಕುಸಿದು ಬಿದ್ದಿದ್ದಾಳೆ ಎನ್ನಲಾಗಿದೆ. ಕೂಡಲೇ ಆಕೆಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಆಕೆ ಅಷ್ಟರಲ್ಲಾಗಲೇ ಮೃತ ಪಟ್ಟಿದ್ದಾಳೆಂದು ವೈದ್ಯರು ದೃಢೀಕರಿಸಿದರು.
ವಿಷಯ ತಿಳಿದ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಡಿಡಿಪಿಐ ರಾಮಚಂದ್ರ ರಾಜೇ ಅರಸ್, ಸರ್ಕಲ್ ಇನ್ಸ್ ಪೆಕ್ಟರ್ ಕೃಷ್ಣಪ್ಪ ಮತ್ತಿತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


