ಜಾರ್ಖಂಡ್: ಪೋಷಕರೇ ಹೆತ್ತ ಮಗಳನ್ನೇ ಹತ್ಯೆ ಮಾಡಿದ್ದಾರೆ. ರಾಮಗಢ ಜಿಲ್ಲೆಯಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ನಿಶ್ಚಿತ ಠೇವಣಿ ಹಣ ನೀಡಲು ನಿರಾಕರಿಸಿದ ತಮ್ಮ ಹದಿಹರೆಯದ ಮಗಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿ ಖುಷಿ ಕುಮಾರಿ(17)ಜನವರಿ 13 ರಂದು ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ನಿಶ್ಚಿತ ಠೇವಣಿ ಹಣ ಕೊಡಲು ನಿರಾಕರಿಸಿದ ಕಾರಣ ತಂದೆ ಮತ್ತು ಮಲತಾಯಿ ತನ್ನ ಸಹೋದರಿಯನ್ನು ಕೊಂದು ಮೃತದೇಹ ನೇಣು ಹಾಕಿದ್ದಾರೆ ಎಂದು ಆರೋಪಿಸಿ ಖುಷಿ ಕುಮಾರಿಯ ಸಹೋದರ, ಭದಾನಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೆಚ್ಯೂರ್ ಆಗಲಿದ್ದ 6 ಲಕ್ಷ ರೂಪಾಯಿ ನಿಶ್ಚಿತ ಠೇವಣಿ ಹಣವನ್ನು ಪೋಷಕರಿಗೆ ನೀಡಲು ಖುಷಿ ನಿರಾಕರಿಸಿದ್ದರು ಎಂದು ಆಕೆಯ ಸಹೋದರ ಹೇಳಿದ್ದಾರೆ. ಸಂತ್ರಸ್ತೆಯ ಸಹೋದರ ಸೋಮವಾರ ದೂರು ನೀಡಿದ ನಂತರ, ಸುನೀಲ್ ಮಹತೋ ಮತ್ತು ಅವರ ಪತ್ನಿ ಪುನಮ್ ದೇವಿ ಅವರನ್ನು ಮಗಳ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಬೀರೇಂದ್ರ ಕುಮಾರ್ ಚೌಧರಿ ಅವರು ತಿಳಿಸಿದ್ದಾರೆ.


