ಸರಗೂರು: ಮಳೆಯಿಂದ ಹಾನಿಗೊಳಗಾದ ಮನೆ ದುರಸ್ತಿಗೆ ಪರಿಶೀಲನೆಗೆ ಬರುವ ಗ್ರಾಮ ಲೆಕ್ಕಿಗರು 60ರಿಂದ 80 ಸಾವಿರ ರೂಪಾಯಿ ಹಣ ಲಂಚ ನೀಡಬೇಕು ಎಂದು ಬೇಡಿಕೆಯಿಡುತ್ತಿದ್ದಾರೆ ಎಂದು ಆರೋಪಿಸಿ, ಕೊತ್ತೇಗಾಲ ಗ್ರಾಮಸ್ಥರು ತಾಲ್ಲೂಕು ಕಛೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಈ ಸಂಬಂಧ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ತಹಸೀಲ್ದಾರ್ ಚಲುವರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಉಂಟಾದ ಭಾರಿ ಮಳೆಯಿಂದಾಗಿ ಸಾಕಷ್ಟು ಮನೆಯ ಗೋಡೆಗಳು, ಮೇಲ್ಚಾವಣಿಗಳು ಕುಸಿದು ಹೋಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿಯುಂಟಾಗಿತ್ತು. ಗ್ರಾಮಸ್ಥರು ಸಹ ಪ್ರವಾಹ ಪೀಡಿತ ಯೋಜನೆಯ ಅಡಿಯಲ್ಲಿ ಪರಿಹಾರವನ್ನು ನೀಡಿ ಮನೆಗಳ ದುರಸ್ತಿಗೆ ಸಹಕರಿಸುವಂತೆ ಕೋರಿ ಅರ್ಜಿಗಳನ್ನು ಸಹ ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದರು.
ಆ ಸಂಬಂಧ ಪರಿಶೀಲನೆಗೆ ಬಂದಿದ್ದ ಗ್ರಾಮ ಲೆಕ್ಕಿಗರು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವ ಸುಮಾರು 20 ಮನೆಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಅಲ್ಲದೇ ಕೆಲವರ ಬಳಿ ಹಣ ಪಡೆದು ಅವರನ್ನು ಫಲಾನುಭವಿಗಳ ಪಟ್ಟಿಗೆ ಸೇರಿಸಿದ್ದಾರೆ. ಉಳಿದ 20 ಮನೆಯ ಫಲಾನುಭವಿಗಳ ಹೆಸರನ್ನು ಸೇರಿಸಲು 60-80 ಸಾವಿರ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬುಧವಾರ ಗ್ರಾಮಸ್ಥರು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟಿಸಿ ದಂಡಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ವೇಳೆ ಮಾತನಾಡಿದ ಗ್ರಾಮದ ಮುಖಂಡ ಬಸವಣ್ಣ, ನಮ್ಮ ಗ್ರಾಮದಲ್ಲಿ ಮಳೆಯಿಂದಾಗಿ ಹಾನಿಯಾಗಿದ್ದ ಮನೆಗಳ ಪರಿಹಾರಕ್ಕೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ ಪರಿಶೀಲನೆಗೆ ಬಂದ ಗ್ರಾಮ ಲೆಕ್ಕಿಗರು ಕೆಲವರ ಬಳಿ 70-80 ಸಾವಿರ ಹಣವನ್ನು ಪಡೆದು ಅವರನ್ನು ಫಲಾನುಭವಿಗಳ ಪಟ್ಟಿಗೆ ಸೇರಿಸಿದ್ದಾರೆ. ಆದರೆ ಬಡವರನ್ನು ಕೈ ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮೊದಲು ಬಡವರಿಗೆ ಆದ್ಯತೆ ಕೊಡುವಂತಾಗಬೇಕು. ಈ ಬಗ್ಗೆ ತನಿಖೆ ನಡೆಸಿ ಬಡರಿಗೆ ಮನೆಗಳನ್ನು ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಕಳೆದ ಬಾರಿಯೂ ಸಹ ಈ ಬಗ್ಗೆ ತಹಸೀಲ್ದಾರ್ ರವರಿಗೆ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗದೆ ತನಿಖೆ ನಡೆಸುವಂತೆ ಆಗ್ರಹಿಸಿ ಈ ಬಾರಿ ಪ್ರತಿಭಟಿಸಿ ಇಂದು ತಹಸೀಲ್ದಾರ್‍ರವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಇದು ಕೇವಲ ನಮ್ಮ ಗ್ರಾಮದ ಸಮಸ್ಯೆ ಮಾತ್ರವಲ್ಲ ಇದು ನಮ್ಮ ತಾಲ್ಲೂಕಿನ ಸಾಕಷ್ಟು ಗ್ರಾಮ ಪಂಚಾಯಿತಿಗಳ ಸಮಸ್ಯೆಯಾಗಿದೆ ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಮನವಿಯನ್ನು ಸ್ವೀಕರಿಸಿ ಬಳಿಕ ಮಾತನಾಡಿದ ತಹಸೀಲ್ದಾರ್ ಚಲುವರಾಜು, ಈ ಮನವಿಯ ಕುರಿತಂತೆ ಕಾನೂನಾತ್ಮಕವಾಗಿ ತನಿಖೆ ನಡೆಸಲಾಗುವುದು. ಇದು ಯಾರಿಗೂ ಮನೆ ಹಂಚಿಕೆಯ ಯೋಜನೆಯಲ್ಲ ಬದಲಿಗೆ ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ಒದಗಿಸುವುದಾಗಿದೆ. ಅರ್ಜಿಗಳು ಬಂದ ಸ್ಥಳಕ್ಕೆ ಗ್ರಾಮ ಲೆಕ್ಕಿಗರು ಭೇಟಿ ಮಾಡಿ ಹಾನಿಯ ಪ್ರಮಾಣವನ್ನು ನೋಡಿ ಅದಕ್ಕನುಗುವಾಗಿ ಪರಿಹಾರದ ಪಟ್ಟಿಗೆ ಸೇರಿಸಬೇಕು. ಆದರೆ ಇದರಲ್ಲಿ ಲೋಪವಾಗಿದೆ ಎಂದು ಕೊತ್ತೇಗಾಲ ಗ್ರಾಮದಿಂದ ಬಂದಿರುವ ದೂರಿನ ಅನ್ವಯ ಗ್ರಾಮ ಲೆಕ್ಕಿಗರಿಗೆ ನೋಟಿಸ್ ನೀಡಿ ಘಟನೆಯ ಕುರಿತಂತೆ ಅವರಿಂದ ಉತ್ತರ ಪಡೆದು ಬಳಿಕ ಕಾನೂನಿನ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಒಂದು ವೇಳೆ ಲೋಪ ಕಂಡುಬಂದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶೋಭ, ಗ್ರಾಮಸ್ಥರಾದ ರಾಮಚಂದ್ರ, ಆದಿರಾಜಪ್ಪ, ನಾಗಗೌಡ, ಬಿ.ನಾಗರರಾಜು, ಬಸವರಾಜು, ದೇವಮಣಿ, ನಾಗಮ್ಮ, ರತ್ನಮ್ಮ, ಶಿವಮ್ಮ, ಬೀರೇಗೌಡ, ಮಲ್ಲೇಗೌಡ, ಪ್ರಭುಸ್ವಾಮಿ, ಹರೀಶ, ಶಂಕರೇಗೌಡ, ಗಿರೀಶ್, ಶಿವು ಮುಂತಾದವರು ಹಾಜರಿದ್ದರು.
ವರದಿ: ಚಂದ್ರಹಾದನೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700