ತುಮಕೂರು: ಸಿರಾ ತಾಲೂಕಿನ ಪದ್ಮಾಪುರ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ಆತನ ಜೊತೆಗೆ ಮತ್ತೋರ್ವ ಜಾತಿ ನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ದೂರುದಾರರಿಗೆ ಪರಿಹಾರವಾಗಿ ಸರ್ಕಾರ 25 ಸಾವಿರ ರೂ. ನೀಡಿದ್ದು, ಈ ಹಣವನ್ನು ಸಾಮಾಜಿಕ ಕೆಲಸಗಳಿಗೆ ವಿನಿಯೋಗಿಸಲಾಗಿದೆ.
ಸಮಾಜವನ್ನು ತಿದ್ದ ಬೇಕಾಗಿದ್ದ ಶಿಕ್ಷಕ ಜಾತಿ ನಿಂದಿಸಿ, ಜನಾಂಗಗಳ ಘನತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಹಂದ್ರಾಳ್ ನಾಗಭೂಷಣ್ ದೂರು ದಾಖಲಿಸಿದ್ದರು. ಈ ದೂರಿನನ್ವಯ ದೂರುದಾರರಿಗೆ ಸರ್ಕಾರ 25 ಸಾವಿರ ರೂ. ಪರಿಹಾರವನ್ನು ನೀಡಿತ್ತು. ಇದು ಸಾರ್ವಜನಿಕ ಹಣವಾಗಿರುವುದರಿಂದ ಹಂದ್ರಾಳ್ ನಾಗಭೂಷಣ್ ಅವರು ಈ ಹಣ ಸಮಾಜಕ್ಕೆ ಸೇರಬೇಕಾದದ್ದು ಅನ್ನೋ ನಿಟ್ಟಿನಲ್ಲಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ನೂರುನ್ನಿಸ್ಸಾ ಹಾಗೂ ಡಾ.ವೀಣಾ ಅವರ ಸಮ್ಮುಖದಲ್ಲಿ ಕಷ್ಟದಲ್ಲಿರುವ 12 ಜನ ಬಡ ರೋಗಿಗಳಿಗೆ ಈ ಹಣವನ್ನು ಹಂಚಲಾಯಿತು.
ಇದೇ ವೇಳೆ ಮಾತನಾಡಿದ ನಾಗಭೂಷಣ್, ನಾನು ಹಾಗೂ ನನ್ನ ಹೋರಾಟದ ಸ್ನೇಹಿತರು, ಯಾವುದೇ ರೀತಿಯ ಹಣದ ಆಸೆಗಾಗಿ, ಆಮಿಷಕ್ಕಾಗಿ ಹೋರಾಟ ಮಾಡುತ್ತಿಲ್ಲ. ಅಥವಾ ಯಾವುದೇ ಜಾತಿ ಧರ್ಮದ ಪರವಾಗಿ ಹೋರಾಟ ಮಾಡುತ್ತಿಲ್ಲ. ನಾವುಗಳು ಸದಾ ಯಾವುದೇ ಜಾತಿಯ, ಧರ್ಮದ ನೊಂದವರ ಮತ್ತು ಧ್ವನಿ ಇಲ್ಲದವರ ಪರ ಹೋರಾಟ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನಮ್ಮ ಸಮಿತಿಯ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಉಪಾದ್ಯಕ್ಷರಾದ ನಟರಾಜು, ಕಾರ್ಯದರ್ಶಿಗಳಾದ ಮಾಚನಹಳ್ಳಿ ಮುನಿರಾಜು, ಸರಸ್ವತಿ ಪುರಂ ಮಂಜುನಾಥ್, ಕುಣಿಗಲ್ ನರಸಿಂಹಮೂರ್ತಿ, ವಕೀಲರಾದ ಗಣೇಶ್ ಮಾರನಹಳ್ಳಿ, ಶಿವಕುಮಾರ್ ಮಾಸ್ಟರ್ ಮನೆ, ಶೇಖರ್, ಚಿನ್ಮಯ್, ಮೋಹನ್, ಲೋಕೇಶ್, ಪವಿತ್ರ, ಜಬೀನ್ ತಾಜ್, ಮಾರ್ಗದರ್ಶಕರು ಹಿರಿಯರು ಆದ ನಿವೃತ್ತ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಜಯರಾಂ, ಬೆಳಧರ ರಫೀಕ್, ಪುಟ್ಟರಾಜು ಇತರರು ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1