ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಹುಳಿಯಾರು ರಸ್ತೆಯ ಅಗಲಿಕರಣದ ಕಾಮಗಾರಿ ನಡೆಸುತ್ತಿದ್ದು, ಕಾಮಗಾರಿಗಾಗಿ ಇಲ್ಲಿ ವಾಸವಿದ್ದ ನಾಗರಿಕರ ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಆದರೆ ಯಾವುದೇ ಪರಿಹಾರ ನೀಡದೇ, ಮೂಲಭೂತ ಸೌಕರ್ಯವನ್ನೂ ಕಲ್ಪಿಸದ ಹಿನ್ನೆಲೆಯಲ್ಲಿ ಜನರು ಬೀದಿಪಾಲಾಗಿದ್ದಾರೆ.
ನಮ್ಮ ಮನೆಗಳನ್ನು ಧ್ವಂಸ ಮಾಡಲಾಗಿದೆ. ಆದರೆ, ನಮಗೆ ಯಾವುದೇ ಪರಿಹಾರ ನೀಡಲಾಗಿಲ್ಲ. ದಿನನಿತ್ಯ ಕೂಲಿಯನ್ನು ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ಆದರೆ ಇದೀಗ ಇರುವ ಮನೆಯನ್ನೂ ಕಳೆದುಕೊಂಡು ಬೀದಿ ಪಾಲಾಗಿದ್ದೇವೆ ಎಂದು ನಮ್ಮತುಮಕೂರು ಜೊತೆಗೆ ನಾಗರಿಕರು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರದ ಆದೇಶದಂತೆ ಅಳತೆ ಮಾಡದೇ, ಸಂಬಂಧಪಟ್ಟ ಅಧಿಕಾರಿಗಳು ತಮಗೆ ತೋಚಿದಂತೆ ಅಳತೆ ಮಾಡುವ ಮೂಲಕ ಜನರಿಗೆ ಮೋಸ ಮಾಡಿದ್ದಾರೆ. ವಾರ್ಡ್ ನಂ 28ರಲ್ಲಿನ ವಾರ್ಡ್ ನಗರಸಭೆ ಸದಸ್ಯರು ಸಹ ಇತ್ತ ಕಡೆ ಗಮನಹರಿಸುವುದಿಲ್ಲ ಹಾಗೂ ನಮಗೆ ವಾರ್ಡ್ ನಗರಸಭೆ ಸದಸ್ಯರು ಯಾರು ಅನ್ನೋದು ಸಹ ನಮಗೆ ಗೊತ್ತಿಲ್ಲ ಎಂದು ಜನರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಸರ್ಕಾರಿ ಶಾಲೆಯೂ ಇದ್ದು, ಶಾಲೆಯ ಮುಂಭಾಗವನ್ನು ಅಗೆದು ಹಾಗೆಯೇ ಬಿಡಲಾಗಿದೆ. ಶಾಲೆಗೆ ವಿದ್ಯಾರ್ಥಿಗಳು ಹೇಗೆ ಹೋಗುವುದು ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆಯಾದರೆ ಅಧಿಕಾರಿಗಳು ಮತ್ತು ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಪ್ರತಿನಿಧಿಗಳು ನಮ್ಮ ಸಮಸ್ಯೆಗಳನ್ನು ಆಲಿಸಬೇಕು, ಬೀದಿಪಾಲಾಗಿರುವ ಜನರಿಗೆ ಸರ್ಕಾರ ಮೂಲಭೂತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


