ತುಮಕೂರು : ಪತ್ರಕರ್ತರ ಮೇಲೆ ಹಲ್ಲೆ ಯತ್ನ ನಡೆಸಿದ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಕಿವಿ ಮೂಗು ಗಂಟಲು ತಜ್ಞ ಡಾ. ನವೀನ್ ಹಾಗೂ ಪತ್ರಕರ್ತರ ವಿರುದ್ಧವೇ ಸುಳ್ಳು ಪ್ರಕರಣ ದಾಖಲಿಸಿದ ಪಿಎಸ್ ಐ ನಾಗರಾಜ್ ವಿರುದ್ಧ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ತಾಲ್ಲೂಕು ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಪತ್ರಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಕೊರಟಗೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಪಘಾತಕ್ಕೊಳಗಾಗಿದ್ದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ವೈದ್ಯರ ನಡೆಗೆ ಪತ್ರಕರ್ತರು ಆಸ್ಪತ್ರೆಗೆ ತೆರಳಿ ವರದಿ ಮಾಡಲು ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯ ಡಾ.ನವೀನ್ ಎಂಬುವವರು ಪತ್ರಕರ್ತರ ಮೇಲೆ ಹಲ್ಲೆ ಯತ್ನ ನಡೆಸಿದ್ದು, ಪತ್ರಕರ್ತರ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ ವೈದ್ಯರನ್ನು ಕೂಡಲೇ ಅಮಾನತುಗೊಳಿಸಿ ಬಂಧಿಸಬೇಕೆಂದು ಕಾರ್ಯ ನಿರತ ಪತ್ರಕರ್ತರು ಆಗ್ರಹಿಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ ಪತ್ರಕರ್ತರು ವೈದ್ಯ ಡಾ.ನವೀನ್ ಹಾಗೂ ಸುಳ್ಳು ಪ್ರಕರಣ ದಾಖಲಿಸಿದ ಪಿ.ಎಸ್.ಐ. ನಾಗರಾಜು ಅವರನ್ನು ಕೂಡಲೇ ಅಮಾನತುಗೊಳಿಸಿ ಬಂಧಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್, ಅಪಘಾತಕ್ಕೊಳಗಾಗಿ ಸರಿಯಾಗಿ ಚಿಕಿತ್ಸೆ ಸಿಗದೆ ವ್ಯಕ್ತಿಗಳು ಪರದಾಡುತ್ತಿದ್ದ ವೇಳೆ ಸರಿಯಾಗಿ ಚಿಕಿತ್ಸೆ ನೀಡಿದ ಕೊರಟಗೆರೆ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನವೀನ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಪತ್ರಕರ್ತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಪತ್ರಕರ್ತರು ನಿರ್ಭೀತಿಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಕಾರ್ಯನಿರತ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವೈದ್ಯ ಡಾ.ನವೀನ್ ಹಾಗೂ ಸಿಬ್ಬಂದಿ ವರ್ಗ ಮತ್ತು ಪ್ರಕರಣದ ಬಗ್ಗೆ ಯಾವುದೇ ವಿಚಾರಣೆ ನಡೆಸದೆ ಎಫ್ಐಆರ್ ದಾಖಲಿಸಿದ ಪಿಎಸ್ ಐ ನಾಗರಾಜು ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಕೆಯುಡಬ್ಲ್ಯೂಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್ ಮಾತನಾಡಿ, ಪತ್ರಕರ್ತರ ಮೇಲೆ ಸಕಾರಣವಿಲ್ಲದೆ ಹಲ್ಲೆ ನಡೆಸಿರುವ ಕೊರಟಗೆರೆ ವೈದ್ಯ ಡಾ.ನವೀನ್ ಹಾಗೂ ಸುಳ್ಳು ಪ್ರಕರಣ ದಾಖಲಿಸಿರುವ ಪಿಎಸ್ಐ ನಾಗರಾಜ್ ಅವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಈ ಬಗ್ಗೆ ಪರಿಶೀಲನೆ ನಡೆಸಿ, ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದರು.
ನಂತರ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವರಿಗೂ ಮನವಿ ಸಲ್ಲಿಸಲಾಯಿತು. ತದನಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿ ವೈದ್ಯ ಡಾ.ನವೀನ್ ಮತ್ತು ಪಿಎಸ್ಐ ನಾಗರಾಜ್ ಅವರ ಅಮಾನತ್ತಿಗೆ ಆಗ್ರಹಿಸಿದರು.
ಈ ಸಂಬಂಧ ಮನವಿಯನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಮತ್ತು ಡಿಹೆಚ್ಒ ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಹಿರಿಯ ಪತ್ರಕರ್ತರಾದ ಪುರುಷೋತ್ತಮ್ ಮೊದಲಿಯಾರ್, ತೋ.ಸಿ.ಕೃಷ್ಣಮೂರ್ತಿ, ಪಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಎಸ್.ಡಿ.ಚಿಕ್ಕಣ್ಣ, ಸತೀಶ್ ಹಾರೋಗೆರೆ, ಮಂಜುನಾಥ್ ನಾಯಕ್, ಯಶಸ್, ಟಿ.ಹೆಚ್.ಸುರೇಶ್, ಸಿದ್ಧಲಿಂಗಸ್ವಾಮಿ, ದಶರಥ, ಮಣ್ಣೆರಾಜು, ಕುಚ್ಚಂಗಿ ಪ್ರಸನ್ನ, ತುರುವೇಕೆರೆ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ದುಂಡ, ಕುಣಿಗಲ್ ತಾಲ್ಲೂಕು ಅಧ್ಯಕ್ಷ ರಂಗನಾಥ್, ಚಿ.ನಾ.ಹಳ್ಳಿ ತಾಲ್ಲೂಕು ಅಧ್ಯಕ್ಷ ಯೋಗೀಶ್, ಶಿರಾ ತಾಲ್ಲೂಕು ಅಧ್ಯಕ್ಷ ಜಯಪಾಲ್ ಸೇರಿದಂತೆ ನಗರ ಘಟಕ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪತ್ರಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy