ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ವಿಷಪೂರಿತ ಮೇವು ಸೇವಿಸಿ 50ಕ್ಕೂ ಹೆಚ್ಚು ಕುರಿಗಳು ಅಸುನೀಗಿರುವ ಘಟನೆ ಪೆನ್ನೋಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಘಟನೆಯ ವಿವರ: ಪೆನ್ನೋಬನಹಳ್ಳಿ ಗ್ರಾಮದ ನಿವಾಸಿ ರಾಮಣ್ಣ ಅವರ ಪತ್ನಿ ಜಂಪಕ್ಕ ಅವರು ಕುರಿ ಸಾಕಾಣಿಕೆಯಿಂದಲೇ ತಮ್ಮ ಜೀವನೋಪಾಯ ನಡೆಸುತ್ತಿದ್ದರು. ಎಂದಿನಂತೆ ಶನಿವಾರ ಬೆಳಗ್ಗೆ ತಮ್ಮ 300 ಕುರಿಗಳ ಹಿಂಡನ್ನು ಮೇವಿಗಾಗಿ ಗ್ರಾಮದ ಹೊರವಲಯಕ್ಕೆ ಕರೆದೊಯ್ದಿದ್ದರು. ಈ ವೇಳೆ ಹೊಲದಲ್ಲಿದ್ದ ಸುಮಾರು ಎರಡು ತಿಂಗಳ ಪ್ರಾಯದ ಮೆಕ್ಕೆಜೋಳದ ಎಳೆಯ ಪೈರನ್ನು ಕುರಿಗಳು ತಿಂದಿವೆ.
ಪೈರು ತಿಂದ ಕೆಲವೇ ಕ್ಷಣಗಳಲ್ಲಿ ಕುರಿಗಳಲ್ಲಿ ಹೊಟ್ಟೆ ಉಬ್ಬರ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ 45 ರಿಂದ 50 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಮೃತ ಕುರಿಗಳ ಒಟ್ಟು ಮೌಲ್ಯ ಸುಮಾರು 4 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಏಕಾಏಕಿ ಸಂಭವಿಸಿದ ಈ ದುರಂತದಿಂದ ಬಡ ಮಹಿಳೆ ಜಂಪಕ್ಕ ಆಘಾತಕ್ಕೊಳಗಾಗಿದ್ದು, ಕಣ್ಣೀರು ಹಾಕುತ್ತಾ ಸರ್ಕಾರದ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.
ಪರಿಹಾರದ ಭರವಸೆ: ವಿಷಯ ತಿಳಿಯುತ್ತಿದ್ದಂತೆಯೇ ತಾಲ್ಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ವರಕೇರಪ್ಪ ಮತ್ತು ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿತು.
“ಮೆಕ್ಕೆಜೋಳದ ಎಳೆಯ ಪೈರಿನಲ್ಲಿ ಸೈನೆಡ್ ಅಂಶವಿರುವುದರಿಂದ ಅದು ವಿಷವಾಗಿ ಪರಿಣಮಿಸಿ ಕುರಿಗಳು ಸಾವನ್ನಪ್ಪಿವೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಮತ್ತು ಇಲಾಖೆಯ ‘ಅನುಗ್ರಹ’ ಯೋಜನೆಯಡಿ ಶೀಘ್ರವಾಗಿ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದು ಡಾ. ವರಕೇರಪ್ಪ ಅವರು ಭರವಸೆ ನೀಡಿದ್ದಾರೆ.
ಈ ಘಟನೆಯು ಸುತ್ತಮುತ್ತಲಿನ ಕುರಿಗಾಹಿಗಳಲ್ಲಿ ಆತಂಕ ಮೂಡಿಸಿದ್ದು, ಎಳೆಯ ಮೆಕ್ಕೆಜೋಳದ ಪೈರುಗಳನ್ನು ಮೆಯಿಸದಂತೆ ಪಶುವೈದ್ಯರು ಎಚ್ಚರಿಕೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


