ಪಾವಗಡ : ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು ಹಾಗೂ ಪಂಚನೌಕರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ.ಉತ್ತಮ್ ಅವರ ಆಡಳಿತ ಶೈಲಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಶಾಸಕರಿಗೆ ಲಿಖಿತ ಅಹವಾಲು ಸಲ್ಲಿಸಿದ್ದಾರೆ.
ಇ.ಒ ಅವರಿಂದ ನಿರಂತರ ಮಾನಸಿಕ ಒತ್ತಡ, ಅವಮಾನಕಾರಿ ಭಾಷೆ, ಬೆದರಿಕೆ ಹಾಗೂ ಅಧಿಕಾರ ದುರುಪಯೋಗ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತ ವ್ಯವಸ್ಥೆಯೊಳಗಿನ ಗಂಭೀರ ಅಂತರಂಗ ಸಂಘರ್ಷ ಬಹಿರಂಗವಾಗಿದೆ.
ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಇ.ಒ ಅವರು ಅಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸುವುದು, ಸಭೆಗಳಲ್ಲಿ ಅವಾಚ್ಯ ಪದ ಬಳಸಿ ಕುಗ್ಗಿಸುವುದು ಹಾಗೂ ಬೆದರಿಕೆಯ ಭಾಷೆಯಲ್ಲಿ ಮಾತನಾಡುವುದು ರೂಢಿಯಾಗಿದೆ ಎಂದು ಪಿಡಿಒ ಮತ್ತು ಸಿಬ್ಬಂದಿ, ನೌಕರರ ಒಕ್ಕೂಟ ಆರೋಪಿಸಿದ್ದಾರೆ.
ಇಒ ಉತ್ತಮ್ ಅವರು ಬುದ್ದಿವಂತರೇ ಸರಿ ಯಾಕಿಷ್ಟು ಅಹಂ ಅಂತ ಮಾತನಾಡ್ತಿದ್ದಾರೆ. ಇನ್ನು ಮಹಿಳಾ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳೆಂಬ ಭೇದವಿಲ್ಲದೆ ಟೀಕಿಸುವುದು, ಹೆದರಿಸುವುದು, “ಬುಡಕ್ಕೆ ಕೈ ಹಾಕುತ್ತೇನೆ, ಕೆಲಸದಿಂದ ಕಿತ್ತೆಸೆಯುತ್ತೇನೆ” ಎಂಬ ಮಾತುಗಳಿಂದ ಒತ್ತಡ ಹೇರುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
“ಗ್ರಾಮ ಪಂಚಾಯಿತಿ ಅಧಿಕಾರಿಗಳು ದಪ್ಪ ಚರ್ಮದವರು, ಇವರಿಗೆ ದನಗಳಿಗೆ ಹಾಕುವ ಇಂಜೆಕ್ಷನ್ ಹಾಕಬೇಕು” ಎಂಬ ಹೇಳಿಕೆಗಳು ಆಡಳಿತಾತ್ಮಕ ಮಿತಿಯನ್ನು ಮೀರಿದ್ದು, ಸಿಬ್ಬಂದಿಗಳ ಮಾನಸಿಕ ಆರೋಗ್ಯಕ್ಕೆ ಗಂಭೀರ ಧಕ್ಕೆಯಾಗಿದೆ ಎಂಬ ಆರೋಪವಿದೆ.
ಅಕ್ಟೋಬರ್ ತಿಂಗಳಲ್ಲಿ ಕಚೇರಿಗೆ ನಿಯಮಿತವಾಗಿ ಹಾಜರಿದ್ದರೂ, ಗೈರು ಹಾಜರಿದ್ದಂತೆ ಆರು ದಿನಗಳ ವೇತನ ತಡೆಹಿಡಿಯಲಾಗಿದೆ. ವಾರಕ್ಕೆ ಮೂರು–ನಾಲ್ಕು ಸಭೆಗಳನ್ನು ನಡೆಸಿ ನಿರಂತರ ಒತ್ತಡ ಹೇರುವುದರಿಂದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಸಮಯವೇ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಪ್ರತಿ ತಿಂಗಳು ಇಂತಿಷ್ಟು ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸ್ಪಂದಿಸದೇ ಇದ್ದ ಕಾರಣ ಈ ರೀತಿಯ ಪ್ರಗತಿ ಹಿನ್ನೆಲೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಅನಾರೋಗ್ಯಕ್ಕೆ ತುತ್ತಾದ ಪಿಡಿಒ, ಸಿಬ್ಬಂದಿಗಳಿಗೆ ರಜೆ ನೀಡದೆ ಒತ್ತಡ ಹೇರುತ್ತಿದ್ದಾರೆ ಎಂದು ಕೆಲ ಪಿಡಿಒಗಳು ಗಂಭೀರ ಆರೋಪ ಮಾಡಿದ್ದಾರೆ. 1ರಿಂದ 4 ಆರೋಪಗಳ ಪಟ್ಟಿಯನ್ನು ಸಿದ್ಧಪಡಿಸಿ ನಮ್ಮ ವಾಟ್ಸಾಪ್ ಗಳಿಗೆ ಕಳುಹಿಸಿ ಅಧಿಕಾರಿಗಳನ್ನು ಮಾನಸಿಕವಾಗಿ ವ್ಯಥೆಗೆ ತಳ್ಳಲಾಗುತ್ತಿದೆ. ಪರಿಣಾಮ ಪಂಚಾಯಿತಿ ಕಚೇರಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಭದ್ರತೆ ಹಾಗೂ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪಿಡಿಒಗಳು ಒಕ್ಕೊರಲಿನಿಂದ ಆರೋಪಿಸಿದ್ದಾರೆ.
ಹಿಂದಿದ್ದ ಪಿಡಿಒಗಳು ವಿರುದ್ಧ ಇಂತಹ ಆರೋಪಗಳು ಕೇಳಿ ಬಂದಿಲ್ಲ..ಇದೀಗ ಇ ಒ ಉತ್ತಮ್ ಅವರ ಮೇಲೆ ಗಂಭೀರ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ.ಉತ್ತಮ್, “ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಬೇಕೆಂಬ ಕಾರಣಕ್ಕೆ ಒತ್ತಡ ಹಾಕಿರುವುದು ನಿಜ. ಆದರೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಪಿಡಿಒಗಳು ಹಾಗೂ ಇ.ಒ ನಡುವಿನ ಈ ಆರೋಪ–ಪ್ರತಿ ಆರೋಪಗಳು ತಾಲ್ಲೂಕಿನ ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ವಿಷಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕೆಲ ಪಿಡಿಒಗಳು ಸಂಪೂರ್ಣ ಪ್ರಾಮಾಣಿಕರಲ್ಲ ಹಾಗೆಯೇ ಸಂಪೂರ್ಣ ಅಪ್ರಾಮಾಣಿಕರೂ ಅಲ್ಲ. ಕೆಲವರು ಮಾಡಿದ ತಪ್ಪಿಗೆ ಎಲ್ಲರಿಗೂ ಒಂದೇ ರೀತಿಯ ಶಿಕ್ಷೆ ನ್ಯಾಯವೇ? ಇ.ಒ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು, ಸಮಾಧಾನವಾಗಿದ್ದು ಪ್ರಗತಿ ಕೆಲಸ ಮಾಡಿಸಬಹುದಿತ್ತು ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಈ ಹಿನ್ನೆಲೆಯಲ್ಲಿ ಶಾಸಕರು ಹೆಚ್.ವಿ.ವೆಂಕಟೇಶ್ ಅವರು ತಕ್ಷಣ ಮಧ್ಯಸ್ಥಿಕೆ ವಹಿಸಿ, ಸಂಪೂರ್ಣ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


