ವಾಣಿಜ್ಯ ನಗರಿ ಮುಂಬೈಯಲ್ಲಿ, ಮುಂಬೈನ ಮಾಹೀಂ ರೈಲ್ವೆ ನಿಲ್ದಾಣದಲ್ಲಿನ ಹಳಿಗಳ ಮೇಲೆ ಜನರು ಅಡುಗೆ ತಯಾರಿಸುತ್ತಿರುವ ಹಾಗೂ ಕೆಲವರು ಹಳಿಯ ಮೇಲೆ ಕುಳಿತು ಓದುತ್ತಿರುವ, ಬಟ್ಟೆಗಳನ್ನು ಒಣಗಿಸಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದೆ. ಸುರಕ್ಷತೆಯ ಪ್ರಶ್ನೆಯನ್ನು ಮೂಡಿಸಿದೆ.
ಈ ದೃಶ್ಯವನ್ನು ನೋಡಿದಾಗ ಎಂಥವರು ಒಂದು ಕ್ಷಣ ಗಾಬರಿಯಾಗೋದಂತು ಗ್ಯಾರಂಟಿ.. ರೈಲ್ವೆ ಹಳಿಯ ಮೇಲೆಯೇ ಅಡುಗೆ ಬೇಯಿಸುತ್ತಿರುವ, ಬಟ್ಟೆ ಒಣಗಿಸಿರುವ ಹಾಗೂ ಜನರು, ಮಕ್ಕಳು ಗಿಜಿಗುಟ್ಟುತ್ತಿರುವ ದೃಶ್ಯ ವೀಡಿಯೋದಲ್ಲಿದೆ.
ಈ ವೀಡಿಯೋವನ್ನು ಗಮನಿಸಿ ತಕ್ಷಣವೇ ರೈಲ್ವೆ ಇಲಾಖೆ ಸ್ಥಳಕ್ಕೆ ಭೇಟಿ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ. ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಅಧಿಕಾರಿಯೊಬ್ಬರು, ಮಾಹೀಂ ರೈಲ್ವೆ ಹಳಿಗಳನ್ನು ಮುಖ್ಯವಾಗಿ ರಾತ್ರಿ ವೇಳೆ ಕಾರ್ಯಾಚರಿಸಲು ಬಳಕೆಯಾಗುತ್ತಿದೆ. ಆದರೂ ಕೊಳೆಗೇರಿ ನಿವಾಸಿಗಳು ಈ ಹಳಿಗಳನ್ನು ತಮ್ಮ ಅಗತ್ಯತೆಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ರೈಲ್ವೆ ಇಲಾಖೆ ನಿರಂತರವಾಗಿ ಪರಿಶೀಲಿಸುತ್ತಿದ್ದು, ಈ ಬಗ್ಗೆ ಗಮನ ಹರಿಸುತ್ತೆ ಎಂದು ತಿಳಿಸಿದ್ದಾರೆ.


