ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆಯಲ್ಲಿ ಈ ಬಾರಿ ಸಿಮೀತ ಮಳಿಗೆಗಳಲ್ಲಿ ಶನಿವಾರ ಪಟಾಕಿ ವ್ಯಾಪಾರ ಆರಂಭವಾಯಿತು. ಕಡಿಮೆ ಸಂಖ್ಯೆಯಲ್ಲಿ ಮಳಿಗೆಗಳನ್ನು ತೆರೆದ ಕಾರಣ ಜನಸಂದಣಿ ಕಂಡು ಬಂದಿತು. ಇದರಿಂದ ಗಡಿ ಭಾಗದ ರಸ್ತೆಗಳಲ್ಲಿ ಕಿಲೋಮೀಟರ್ ಗಟ್ಟಲೇ ವಾಹನ ದಟ್ಟಣೆ ಉಂಟಾಗಿತ್ತು.
ಹೈಕೋರ್ಟ್ ಆದೇಶದಂತೆ ಅತ್ತಿಬೆಲೆ ಹೋಬಳಿಯಲ್ಲಿ 22 ಪಟಾಕಿ ಮಳಿಗೆ ತೆರೆಯಲು ಹಾಗೂ ಪ್ರತಿ ಮಳಿಗೆಯಲ್ಲೂ 600 ಕೆ. ಜಿ ಪಟಾಕಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಬೆಳಕಿನ ಹಬ್ಬಕ್ಕೆ ಮೆರುಗು ಹೆಚ್ಚಿಸುವ ಹೂವು, ಹಣ್ಣು, ಹಣತೆ, ಆಲಂಕಾರಿಕ ವಸ್ತುಗಳ ಖರೀದಿಗೆ ಜನ ಮಳಿಗೆಗಳಲ್ಲಿ ಮುಗಿಬಿದ್ದಿದ್ದರು.
ಮಾರುಕಟ್ಟೆಗಳಲ್ಲಿ ಮಣ್ಣಿನ ಹಣತೆಗಳನ್ನು ರಸ್ತೆ ಬದಿಗಳಲ್ಲೇ ರಾಶಿ ಹಾಕಲಾಗಿದೆ. ತರಹೇವಾರಿ ವಿನ್ಯಾಸದ ಹಣತೆಗಳು ಜನರನ್ನು ಆಕರ್ಷಿಸುತ್ತಿದ್ದವು. ದೀಪವೊಂದರ ಬೆಲೆ 15ರಿಂದ 300ವರೆಗಿದೆ.
ಉದ್ಯೋಗ ಹಾಗೂ ನಾನಾ ಕಾರಣಗಳಿಂದ ನಗರದಲ್ಲಿ ನೆಲೆಸಿರುವವರು ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ತಮ್ಮ ಊರುಗಳಿಗೆ ಹೊರಟಿರುವುದರಿಂದ ನಗರದ ಬಸ್ ನಿಲ್ದಾಣಗಳಲ್ಲಿ ಭಾರಿ ಜನದಟ್ಟಣೆ ಉಂಟಾಯಿತು. ಹೊರಜಿಲ್ಲೆ, ಹೊರರಾಜ್ಯಗಳನ್ನು ಸಂಪರ್ಕಿಸುವ ನಗರದ ರಸ್ತೆಗಳಲ್ಲಿ ವಾಹನದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ತೊಡಕುಂಟಾಯಿತು. ಜನರು ಲಗೇಜುಗಳೊಂದಿಗೆ ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ಸ್ಯಾಟ್ ಲೈಟ್ ಬಸ್ ನಿಲ್ದಾಣಗಳ ಕಡೆಗೆ ಗುಂಪು ಗುಂಪಾಗಿ ಬರತೊಡಗಿದ್ದರು.


