ತುಮಕೂರು: ಪ್ರೀತಿ, ವಾತ್ಸಲ್ಯ, ಕರುಣೆಯಂತಹ ಮಾನವೀಯ ಮೌಲ್ಯಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಆದರೆ ಸಾಕು ಪ್ರಾಣಿಗಳನ್ನೂ ಸಾಕುವವರಲ್ಲಿ ಇಂತಹ ಗುಣಗಳನ್ನು ಹೆಚ್ಚುತ್ತಿವೆ . ಇದಕ್ಕೆ ಸಾಕುಪ್ರಾಣಿಗಳು ತನ್ನ ಒಡೆಯನ ಮೇಲೆ ತೋರುವ ನಿಷ್ಕಲ್ಮಷ ಹಾಗೂ ಅಪರಿಮಿತ ಪ್ರೀತಿಯೇ ಕಾರಣ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಮತ್ತು ಇನ್ನರ್ ವೀಲ್ ಕ್ಲಬ್ ನ ಸಂಯುಕ್ತಾಶ್ರಾಯದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 2023-24 ನೇ ಸಾಲಿನ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಅಭಿವೃದ್ದಿಯ ಹೆಸರಿನಲ್ಲಿ ಮಾನವ ಸಂಬಂಧಗಳು ನಶಿಸುತ್ತಿವೆ. ಸಾಕು ಪ್ರಾಣಿಗಳು ಮನುಷ್ಯರೊಟ್ಟಿಗೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿಕೊಂಡಿವೆ. ಶ್ವಾನ, ಬೆಕ್ಕು, ಅನೇಕ ಸಾಕುಪ್ರಾಣಿಗಳು ಮನೆಯ ಒಬ್ಬ ಸದಸ್ಯರಂತೆ ಬದುಕುತ್ತಿವೆ ಎಂದರು.
ಸಾಕು ಪ್ರಾಣಿಗಳನ್ನೂ ನೋಡಿಕೊಳ್ಳುವುದು ಕೂಡ ಒಂದು ಒಳ್ಳೆಯ ಹವ್ಯಾಸ, ಅವುಗಳೊಂದಿಗೆ ಸಮಯ ಕಳೆಯುವುದು ಮನಸ್ಸಿಗೆ ಖುಷಿ ನೀಡುತ್ತದೆ. ಸಾಕು ಪ್ರಾಣಿಗಳು ಸ್ವಾಮಿ ನಿಷ್ಠೆ ಪಾಲಿಸುತ್ತವೆ ಎಂದು ಹೇಳಿದರು.
ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನದಲ್ಲಿ 25 ತಾಳಿ ಶ್ವಾನ, 22 ಬೆಕ್ಕುಗಳು ಪಾಲ್ಗೊಂಡಿದ್ದವು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಜಿ. ಗಿರೀಶ್ ಬಾಬು ರೆಡ್ಡಿ, ಕರ್ನಾಟಕ ಪಶು ವೈದ್ಯಕೀಯ ಸಂಘ ಅಧ್ಯಕ್ಷ ಡಾ.ವೈ.ಜಿ. ಕಾಂತರಾಜು, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಪವಿತ್ರ ಶಿವಪ್ರಕಾಶ್, ಜಿಲ್ಲೆಯ ಪಶು ವೈದ್ಯಾಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.


