ಇತ್ತೀಚೆಗೆ ದೆಹಲಿ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಪಿಟ್‌ಬುಲ್ ನಾಯಿ ದಾಳಿ ಘಟನೆಗಳು ನಡೆದಿವೆ. ಬಹಳ ಕಟ್ಟುಮಸ್ತಾದ, ಭಯಂಕರವೆನಿಸುವ ಈ ನಾಯಿಗಳನ್ನು ಕಂಡರೆ ಜನರು ಹೆದರಿ ಮಾರು ದೂರ ಹೋಗುವಂತಾಗಿದೆ.
ಘಾಜಿಯಾಬಾದ್‌ನಲ್ಲಿ ಇತ್ತೀಚೆಗೆ ಪಾರ್ಕ್‌ನಲ್ಲಿ ವಾಕ್ ಮಾಡುತ್ತಿದ್ದ 10 ವರ್ಷದ ಬಾಲಕನನ್ನು ಪಿಟ್‌ಬುಲ್ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ನವದೆಹಲಿ ಪಕ್ಕದಲ್ಲೇ ಇರುವ ಇದೇ ಘಾಜಿಯಾಬಾದ್‌ನಲ್ಲಿ 6 ವರ್ಷದ ಬಾಲಕನೊಬ್ಬನನ್ನು ಮತ್ತೊಂದು ಪಿಟ್‌ಬುಲ್ ನಾಯಿ ದಾಳಿ ಮಾಡಿ ಗಾಯಗಳಿಸಿತ್ತು. ಗುರುಗ್ರಾಮದಲ್ಲಿ ಒಬ್ಬ ಮಹಿಳೆ, ಲಕ್ನೋದಲ್ಲಿ ವೃದ್ಧೆಯೊಬ್ಬರ ಮೇಲೆ ಪಿಟ್‌ಬುಲ್ ದಾಳಿ ಮಾಡಿ ಗಾಯ ಮಾಡಿದೆ.
ಬೆಂಗಳೂರಿನಲ್ಲೂ ಪಿಟ್‌ಬುಲ್ ಡಾಗ್ ದಾಳಿ ಘಟನೆಗಳು ಹಲವು ಜರುಗಿವೆ. ಕಳೆದ ವರ್ಷ ಯಲಹಂಕದ ಅಟ್ಟುರು ಲೇಔಟ್ ಬಳಿಕ ಕಟ್ಟಡ ಕೆಲಸದಲ್ಲಿದ್ದ ಕಾರ್ಮಿಕನನ್ನು ಪಿಟ್‌ಬುಲ್ ಕೊಂದುಹಾಕಿತ್ತು. ಮಧ್ಯಾಹ್ನ ಕಟ್ಟಡ ಕೆಲಸ ಮುಗಿಸಿ ಪಕ್ಕದ ಮನೆಯ ಸ್ಟೇರ್‌ಕೇಸ್ ಬಳಿ ವಿಶ್ರಾಂತಿ ಮಾಡುತ್ತಿದ್ದವನ ಮೇಲೆ ಪಿಟ್ ಬುಲ್ ದಾಳಿ ಮಾಡಿ, ಕುತ್ತಿಗೆಯನ್ನು ಕಚ್ಚಿ ಸಾಯಿಸಿತ್ತು.
ಐದು ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಇನ್ನೂ ಘೋರ ಘಟನೆ ಸಂಭವಿಸಿತ್ತು. ಪಿಟ್‌ಬುಲ್ ನಾಯಿಯೊಂದು ತನ್ನ ಮಾಲೀಕನ ಮೇಲೆಯೇ ದಾಳಿ ಮಾಡಿ ಸಾಯಿಸಿದ್ದಲ್ಲದೇ ಕತ್ತು ಸೀಳಿ ಹಾಕಿ ರಂಡು ಮತ್ತು ಮುಂಡ ಬೇರ್ಪಡಿಸಿತ್ತು. ರಕ್ತಸಿಕ್ತಗೊಂಡ ಬಾಯಿಯ ಪಿಟ್‌ಬುಲ್ ಮತ್ತು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಾಲಿಕನ ದೇಹದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹೋಗಿತ್ತು.
ಚಿಕ್ಕಮಗಳೂರಿನಲ್ಲಿ ರಕ್ಕಸನಂತೆ ವರ್ತಿಸಿದ್ದ ಆ ಪಿಟ್‌ಬುಲ್ ನಾಯನ್ನು ಮಾಲೀಕ 9 ಲಕ್ಷ ಕೊಟ್ಟು ಖರೀದಿಸಿದ್ದ. ಜನರಿಗೆ ಈ ಜಾತಿಯ ನಾಯಿ ಸಾಕುವುದು ಪ್ರತಿಷ್ಠೆಯ ಸಂಗತಿಯಾಗಿದೆ. ಆದರೆ, ಬಹಳ ಆಕ್ರಮಣಕಾರಿ ವರ್ತನೆಯ ಈ ನಾಯಿ ಸಾಮಾನ್ಯವಲ್ಲ, ಚಿರತೆಯಂಥ ಕಾಡುಮೃಗದಷ್ಟೇ ಕ್ರೂರ ಎನ್ನಲಾಗುತ್ತದೆ.
ಏನಿವು ಪಿಟ್‌ಬುಲ್ ನಾಯಿಗಳು?
ಪಿಟ್‌ಬುಲ್ ಎಂಬುದು ಒಂದು ಜಾತಿಯ ನಾಯಿಯಲ್ಲ. ನಾಲ್ಕು ವಿವಿಧ ಬ್ರೀಡ್‌ಗಳ ನಾಯಿಗಳನ್ನು ಪಿಟ್‌ಬುಲ್ ನಾಯಿಗಳೆಂದು ವರ್ಗೀಕರಿಸಲಾಗಿದೆ. ಅಮೆರಿಕನ್ ಪಿಟ್ ಬುಲ್ ಟೆರಿಯರ್, ಸ್ಟಾಫಾರ್ಡ್‌ಶೈರ್ ಟೆರಿಯರ್, ಬುಲ್ ಟೆರಿಯರ್, ಅಮೆರಿಕನ್ ಬುಲ್ಲಿ, ಈ ನಾಲ್ಕು ಜಾತಿಯ ನಾಯಿಗಳನ್ನು ಪಿಟ್‌ಬುಲ್ ಎಂದು ಕರೆಯುತ್ತಾರೆ.
ಪಿಟ್‌ಬುಲ್ ಹೆಸರು ಯಾಕೆಂದರೆ ಈ ನಾಯಿಗಳನ್ನು ಹಿಂದೆ ಗೂಳಿ ಮತ್ತು ಕರಡಿಯನ್ನು ಕಚ್ಚುವ ಕ್ರೂರ ಆಟಕ್ಕೆ ಬಳಸಲಾಗುತ್ತಿತ್ತು. ಯೂರೋಪ್‌ನಲ್ಲಿ ಹಿಂದೆ ಅತಿ ಘೋರ ಎನಿಸುವ ಕ್ರೌರ್ಯಭರಿತ ಆಟಗಳು ಇದ್ದವು. ಗೂಳಿಯನ್ನು ಭರ್ಜಿಯಿಂದ ಚುಚ್ಚಿ ಸಾಯಿಸುವ ಆಟ, ಗುಲಾಮರು ಮತ್ತು ಕ್ರೂರ ಪ್ರಾಣಿಗಳ ಮಧ್ಯೆ ಫೈಟ್ ಮಾಡಿಸುವ ಆಟಗಳಿದ್ದವು. ಹಾಗೆಯೇ, ಕಟ್ಟಿಹಾಕಿದ ಕರಡಿ ಅಥವಾ ಗೂಳಿಯ ಮೇಲೆ ಪಿಟ್‌ಬುಲ್ ನಾಯಿಗಳಿಂದ ದಾಳಿ ಮಾಡಿಸುವ ಆಟವೂ ಇತ್ತು.
ಬುಲ್‌ಡಾಗ್ ಮತ್ತು ಟೆರಿಯರ್ ಜಾತಿಯ ನಾಯಿಗಳನ್ನು ಹೈಬ್ರಿಡ್ ತಳಿಯಾಗಿ ಪಿಟ್‌ಬುಲ್ ನಾಯಿಗಳಿವೆ. ಟೆರಿಯರ್ ನಾಯಿಗಳು ಬೇಟೆಗಾಗಿ ಬಳಕೆಯಾಗುತ್ತವೆ. ಹೈಬ್ರಿಡ್ ತಳಿಯಾದ ಪಿಟ್ ಬುಲ್ ನಾಯಿಯಲ್ಲಿ ಬುಲ್‌ಡಾಗ್ ನಾಯಿಯ ಶಕ್ತಿ ಮತ್ತು ಟೆರಿಯರ್ ನಾಯಿಯ ಚುರುಕುತನ ಎರಡೂ ಮೇಳೈಸಿರುತ್ತವೆ.
ಪಿಟ್ ಬುಲ್ ಯಾಕೆ ಡೇಂಜರ್?
ಯಾವುದೇ ನಾಯಿಯಾದರೂ ಅದಕ್ಕೇ ಆದ ವಿಶೇಷತೆಗಳಿವೆ. ಎಲ್ಲಾ ನಾಯಿಗಳನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ಅಳೆಯಲು ಆಗುವುದಿಲ್ಲ. ಕೆಲ ಜಾತಿಯ ನಾಯಿಗಳು ಮನುಷ್ಯರ ಜೊತೆ ಬಹಳ ಬೇಗ ಒಗ್ಗಿಹೋಗುತ್ತವೆ. ಬಹಳ ಪ್ರೀತಿ, ಸ್ನೇಹದಿಂದ ಇರುತ್ತವೆ. ಇನ್ನೂ ಕೆಲ ಜಾತಿಯ ನಾಯಿಗಳು ಒಬ್ಬರೇ ಮಾಲೀಕನ ಮಾತನ್ನು ಕೇಳುತ್ತವೆ. ಅಂದರೆ ಮನೆಯಲ್ಲಿ ಯಾರಾದರು ಒಬ್ಬರು ಮಾತ್ರ ಆ ನಾಯಿಯನ್ನು ಪಳಗಿಸಬಹುದು. ಬೇರೆಯವರ ಮಾತನ್ನು ಆ ನಾಯಿಗಳು ಕೇಳುವುದಿಲ್ಲ.
ಪಿಟ್‌ಬುಲ್ ಬಹುತೇಕ ಇಂಥ ಜಾತಿಯ ನಾಯಿ. ಇದು ಬಹಳ ಉತ್ಸಾಹ ಇರುವ, ಆಕ್ರಮಣಕಾರಿ ಮನೋಭಾವ ಹೊಂದಿರುವ ನಾಯಿ. ಆರೈಕೆಯಲ್ಲಿ ಸ್ವಲ್ಪ ಹೆಚ್ಚೂಕಡಿಮೆಯಾದರೂ ಕೋಪಗೊಂಡು ಕೆಟ್ಟ ವರ್ತನೆ ತೋರುತ್ತವೆ. ಅಂತೆಯೇ ಅನೇಕ ದೇಶಗಳಲ್ಲಿ ಪಿಟ್‌ಬುಲ್ ನಾಯಿಗಳ ಸಾಕಣೆಯನ್ನು ನಿಷೇಧಸಲಾಗಿದೆ.
ಪಿಟ್‌ಬುಲ್ ಅಂದ್ರೆ ಪ್ರತಿಷ್ಠೆಯ ಸಂಕೇತ
ಪಿಟ್‌ಬುಲ್ ನಾಯಿ ಸುದೃಢಕಾಯ ಹೊಂದಿದೆ. ಜರ್ಮನ್ ಶಫರ್ಡ್, ಲ್ಯಾಬ್ರಡರ್ ಮೊದಲಾದ ಬ್ರೀಡ್‌ಗಳ ನಾಯಿಯನ್ನು ಸಾಕುವುದು ಜನರಿಗೆ ಪ್ರತಿಷ್ಠೆಯ ವಿಷಯ. ಪಿಟ್‌ಬುಲ್ ಸಾಕುವುದು ಅದಕ್ಕಿಂತಲೂ ಪ್ರತಿಷ್ಠೇಯ ಸಂಗತಿ. ಅವರು ಕೆಟ್ಟ ವರ್ತನೆ ತೋರುತ್ತವೆ ಎಂದು ಗೊತ್ತಿದ್ದರೂ ಹುಂಬ ಧೈರ್ಯದಲ್ಲಿ ಜನರು ಪಿಟ್ ಬುಲ್ ಸಾಕಲು ಮುಂದಾಗುತ್ತಾರೆ.
ಪಿಟ್‌ಬುಲ್ ಅನ್ನು ಹೇಗೆ ಸಾಕಬೇಕೆನ್ನುವ ಬಗ್ಗೆ ಜ್ಞಾನ ಇಲ್ಲದೇ ಮಾಮೂಲಿಯ ನಾಯಿಯಂತೆ ಅದರ ಆರೈಕೆ ಮಾಡುತ್ತಾರೆ. ಪಿಟ್‌ಬುಲ್ ನಾಯಿಗೆ ದೇಹಕ್ಕೆ ಕಸರತ್ತು ಸಿಗಬೇಕು. ಅದು ಸಿಗದಿದ್ದಾಗ ನಾಯಿ ಆಕ್ರಮಣಕಾರಿ ವರ್ತನೆ ತೋರುತ್ತದೆ. ಈ ನಾಯಿಯನ್ನು ಮರಿ ಇದ್ದಾಗಲೇ ಜನರ ಜೊತೆ ಬೆರೆಯಲು ಬಿಡಬೇಕು. ನಾಯಿ ಸ್ವಲ್ಪ ಅಗ್ರೆಸಿವ್ ಆಗಿ ವರ್ತಿಸುತ್ತಿದೆ ಎಂದರೆ ತಜ್ಞರ ಬಳಿ ಹೋಗಿ ಸಲಹೆ ಪಡೆಯುವುದು ಉತ್ತಮ. ಇಲ್ಲದಿದ್ದರೆ ಚಿಕ್ಕಮಗಳೂರಿನಲ್ಲಿ ಮಾಲೀಕನ ರುಂಡ ಚೆಂಡಾಡಿದ ಪಿಟ್‌ಬುಲ್ ಕಥೆ ನಿಮ್ಮ ಮನೆಯಲ್ಲೇ ನಡೆಯಬಹುದು.
ಬೀದಿ ನಾಯಿಯಾದ ಪಿಟ್‌ಬುಲ್
ಸಾಕು ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ಮಾಡಿದರೆ ಆ ನಾಯಿಯ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಅನೇಕ ಪಿಟ್‌ಬುಲ್ ನಾಯಿ ಮಾಲೀಕರ ಮೇಲೆ ಪ್ರಕರಣಗಳು ದಾಖಲಾಗಿವೆ. ಸರಿಯಾದ ಆರೈಕೆ ಇಲ್ಲದೇ ಬೆಳೆದ ಪಿಟ್‌ಬುಲ್‌ಗಳು ತಮ್ಮ ಮಾಲೀಕರ ಮೇಲೆ ದಾಳಿ ಮಾಡಿದ ಘಟನೆಗಳು ಹಲವಿವೆ. ಕುತೂಹಲವೆಂದರೆ ಪಿಟ್‌ಬುಲ್‌ಗಳನ್ನು ಸಾಕಲಾಗದೇ ಮಾಲೀಕರು ಶ್ವಾನ ಆರೈಕೆ ಕೇಂದ್ರಗಳಿಗೆ ಕೊಟ್ಟುಬಿಡುವ ಪ್ರಕರಣಗಳು ಹಲವುಂಟು. ಇನ್ನೂ ಕೆಲ ಮಾಲೀಕರು ಇಂಥ ಕೆಟ್ಟ ವರ್ತನೆಯ ನಾಯಿಗಳನ್ನು ಬೀದಿಗೆ ಅಟ್ಟಿಬಿಡುತ್ತಾರೆ.
ಬೀದಿಗೆ ಬಿದ್ದ ಪಿಟ್ ಬುಲ್ ನಾಯಿ ಇನ್ನೂ ಡೇಂಜರಸ್ ಎನಿಸುತ್ತದೆ. ನಗರ ಪ್ರದೇಶಗಳಲ್ಲಿ ಬೀದಿಯಲ್ಲಿ ಆಡುವ ಮಕ್ಕಳ ಮೇಲೆ ಇದು ಎರಗಿದರೆ ಸಾವು ಕಟ್ಟಿಟ್ಟ ಬುತ್ತಿ. ಇಂಥ ನಾಯಿಯನ್ನು ಸಾರ್ವಜನಿಕರು ಸಾಕದಂತೆ ನಿರ್ಬಂಧಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy