ತುಮಕೂರು: ಎಂ.ಕಾಂ. ಪದವಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ಪರಿಣಿತರಿಂದ ಕೌಶಲ್ಯ ಜ್ಞಾನ ಸಂಪಾದಿಸಿದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪಿಒ/ಕ್ಲರಿಕಲ್ ಹುದ್ದೆಗಳಿಗೆ ವಿಪುಲ ಅವಕಾಶಗಳಿದ್ದು ನೌಕರಿ ಪಡೆಯಲು ಸುಲಭ ಎಂದು ಕೆಎಸ್‌ಎಫ್ ತುಮಕೂರು ಶಾಖೆಯ ಶೈಕ್ಷಣಿಕ ಸಮಿತಿ ಅಧ್ಯಕ್ಷ ಪ್ರೊ. ಕೆ. ಚಂದ್ರಣ್ಣ ಹೇಳಿದರು.
ಶ್ರೀ ಸಿದ್ದಗಂಗಾ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಕೃಷಿಕ್ ಸರ್ವೋದಯ ಫೌಂಡೇಶನ್ (ರಿ). ಇವರ ಸಹಯೋಗದೊಂದಿಗೆ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (ಐ.ಬಿ.ಪಿ.ಎಸ್.) ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರ್ದಿಷ್ಟ ಹುದ್ದೆಯ ಗುರಿಯೊಂದಿಗೆ ಮತ್ತು ಪಠ್ಯಕ್ರಮಗಳಿಗೆ ವಿಷಯವಾರು ವೇಳೆಗಳನ್ನು ನಿಗದಿಪಡಿಸಿ ಪರಿಶ್ರಮದೊಂದಿಗೆ ಕೌಶಲ್ಯ ಜ್ಞಾನವನ್ನು ಪಡೆದರೆ ಪರೀಕ್ಷೆಗಳನ್ನು ತೇರ್ಗಡೆ ಹೊಂದಲು ಸುಲಭವಾಗುತ್ತದೆ ಎಂದರು.
ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿದ್ದು, ತಮ್ಮ ವೃತ್ತಿಯನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಾರಂಭಿಸಿದರೆ, ಬ್ಯಾಂಕಿಂಗ್ ಕ್ಷೇತ್ರದ ಸೇವೆಯು ಎಲ್ಲಾ ಕ್ಷೇತ್ರಗಳ ಕೆಲಸಗಳಿಗಿಂತ ಅತ್ಯುತ್ತಮ ಮತ್ತು ಎಲ್ಲಾ ಸೌಲಭ್ಯದೊರೆಯುವ ಕ್ಷೇತ್ರವಾಗಿರುತ್ತದೆ ಎಂದು ತಿಳಿಸಿದರು.
ಶ್ರೀ ಸಿದ್ದಗಂಗಾ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲರಾದ ಡಾ.ಟಿ.ಬಿ. ನಿಜಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಯುಪಿಎಸ್ಸಿ, ಕೆಪಿಎಸ್ಸಿ, ಬ್ಯಾಂಕಿಂಗ್ ಹಾಗೂ ಕೆ.ಇ.ಎ ಪ್ರಾಧಿಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಾಗಲೇ ವಿವಿಧ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ಫೌಂಡೇಷನ್ ಕೋರ್ಸ್ ನೀಡುತ್ತಿದ್ದೇವೆ. ಈ ದಿನ ಕೃಷಿಕ್ ಸರ್ವೋದಯ ಫೌಂಡೇಶನ್ (ರಿ) ಸಂಸ್ಥೆಯವರು ಸಹ ನೀಡುತ್ತಿರುವ ಬ್ಯಾಂಕಿಂಗ್ ಪರೀಕ್ಷೆಯ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಪರೀಕ್ಷೆಗಳನ್ನು ಎದುರಿಸಿದರೆ ನೌಕರಿ ಪಡೆಯುವುದರಲ್ಲಿ ಯಶಸ್ವಿಯಾಗಬಹುದೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯವರಾದ ಶ್ರೀ ಸುಬ್ರಮಣ್ಯ ಎಂ ಇವರು ಕಾರ್ಯಗಾರದಲ್ಲಿ ಮಾತನಾಡುತ್ತಾ ಬೇರೆ ರಾಜ್ಯದ ವಿದ್ಯಾರ್ಥಿಗಳು ಇದರ ಬಗ್ಗೆ ಹೆಚ್ಚು ಒತ್ತುಕೊಟ್ಟು ಪರೀಕ್ಷೆಗಳನ್ನು ಸುಲಭವಾಗಿ ತೇರ್ಗಡೆ ಹೊಂದುತ್ತಾರೆ. ನಮ್ಮ ರಾಜ್ಯದ ವಿದ್ಯಾರ್ಥಿಗಳು ಸಹ ಇದೇ ರೀತಿ ಶ್ರಮ ಪಟ್ಟು ಓದಿ ತೇರ್ಗಡೆಯಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ತಿಳಿಸಿದರು. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಅಂದರೆ ತರಬೇತಿ ಮತ್ತು ಮಾರ್ಗದರ್ಶನ, ಗ್ರಂಥಾಲಯ, ಹಾಗೂ ಹಾಸ್ಟೆಲ್ ಸೌಲಭ್ಯಗಳನ್ನು ಕೃಷಿಕ್ ಸರ್ವೋದಯ ಫೌಂಡೇಶನ್ (ರಿ) ಒದಗಿಸುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಕೆ.ಎಸ್.ಎಫ್. ಸಂಸ್ಥೆಯ ಕಾರ್ಯದರ್ಶಿ ಹೆಚ್.ಎಸ್. ಹನುಮೇಗೌಡ, ಡಾ. ಗುರುರಾಜ್ ಬಿ.ಟಿ., ಶ್ರೀ ಸಿದ್ದಗಂಗಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ರತ್ನಮ್ಮ ವೈ., ಐಕ್ಯೂ ಎಸಿ ಸಂಯೋಜಕರಾದ ಸರ್ವಮಂಗಳ, ಹಾಗೂ ಪ್ರಾಧ್ಯಾಪಕ ವರ್ಗದವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


