ತುಮಕೂರು: ತೋಟಗಾರಿಕೆ ಇಲಾಖೆ ವತಿಯಿಂದ 2025–26ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ(PMKSY) ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಘಟಕಗಳನ್ನು ಅಡಿಕೆ ಬೆಳೆ ಹೊರತು ಪಡಿಸಿ ಇತರೆ ತೋಟಗಾರಿಕೆ ಬೆಳೆಗಳಿಗೆ ಅಳವಡಿಸಿಕೊಳ್ಳಲು ಸಹಾಯಧನ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಅರ್ಜಿ ಆಹ್ವಾನಿಸಿದೆ.
ಸದರಿ ಯೋಜನೆಯಡಿ ರೈತರಿಗೆ ನೀರಿನ ಸಮರ್ಪಕ ಬಳಕೆಯೊಂದಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆದು ಅವರ ಆರ್ಥಿಕ ಮಟ್ಟ ಸುಧಾರಿಸಲು ಸಹಕಾರಿಯಾಗಿರುತ್ತದೆ. ಹನಿ ನೀರಾವರಿ ಅಳವಡಿಕೆಗೆ ಪ್ರತೀ ಫಲಾನುಭವಿಗೆ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಹಾಗೂ ತರಕಾರಿ ಮತ್ತು ವಾಣಿಜ್ಯ ಹೂ ಬೆಳೆಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತಿದ್ದು, ಎಲ್ಲಾ ವರ್ಗದ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಇತರೆ ವರ್ಗದ ರೈತರಿಗೆ(ಸಾಮಾನ್ಯ, ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ವರ್ಗದ ರೈತರಿಗೆ(RD ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ) ಶೇ.90ರಷ್ಟು ಮತ್ತು ನಂತರದ 3 ಹೆಕ್ಟೇರ್ ಪ್ರದೇಶದವರೆಗೆ ಎಲ್ಲಾ ವರ್ಗದ ರೈತರಿಗೆ ಶೇ. 45ರಷ್ಟು ಸಹಾಯಧನ ನೀಡಲಾಗುವುದು. ಎಲ್ಲಾ ವರ್ಗದ ರೈತರಿಗೆ ಈ ಹಿಂದೆ ಅಳವಡಿಸಿಕೊಂಡಿದ್ದ ಸೂಕ್ಷ್ಮ ನೀರಾವರಿ ಪದ್ದತಿ ಹಾಳಾಗಿದ್ದಲ್ಲಿ / ಘಟಕ ಕಾರ್ಯನಿರ್ವಹಿಸದೇ ಇದ್ದಲ್ಲಿ 7 ವರ್ಷಗಳ ನಂತರ ಅದೇ ಜಮೀನಿಗೆ ಮತ್ತೊಮ್ಮೆ ಸೂಕ್ಷö್ಮ ನೀರಾವರಿ ಪದ್ದತಿ ಅಳವಡಿಸಿಕೊಂಡಲ್ಲಿ ಸಹಾಯಧನ ನೀಡಲಾಗುತ್ತದೆ.
ವಿಕಲಚೇತನರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆ ಮತ್ತು ಅಲ್ಪ ಸಂಖ್ಯಾತರ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಸಹಾಯಧನ ವಿತರಿಸಲಾಗುತ್ತಿದ್ದು, ತೋಟಗಾರಿಕೆ ಇಲಾಖೆಯಿಂದ ಅನುಮೋದನೆಗೊಂಡಿರುವ ಕಂಪನಿಗಳಿಂದ ಮಾತ್ರ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಆಸಕ್ತ ರೈತ ಫಲಾನುಭವಿಗಳು ಹತ್ತಿರದ ಗ್ರಾಮ ಪಂಚಾಯತಿ/ತಾಲ್ಲೂಕು ತೋಟಗಾರಿಕೆ ಕಚೇರಿಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯತಿ ಹಾಗೂ ಆಯಾ ತಾಲ್ಲೂಕಿನ ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ತುಮಕೂರು ದೂ.ವಾ.ಸಂ. 0816–2279705, ಗುಬ್ಬಿ: 08131–222659, ಕುಣಿಗಲ್: 08132–221981, ತಿಪಟೂರು: 08134–251424, ಚಿ.ನಾ.ಹಳ್ಳಿ: 08133–267457, ತುರುವೇಕೆರೆ: 08139–288350, ಶಿರಾ: 08135–295530, ಕೊರಟಗೆರೆ: 08138–232920, ಮಧುಗಿರಿ: 08137–282417, ಪಾವಗಡ: 08136–244064ನ್ನು ಸಂಪರ್ಕಿಸಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW