ಬೆಂಗಳೂರು: ಇಸ್ರೇಲಿ ಪ್ರವಾಸಿ ಮಹಿಳೆ ಹಾಗೂ ಹೋಮ್ ಸ್ಟೇ ಮಾಲಕಿಯ ಮೇಲೆ ನಡೆದ ಅತ್ಯಾಚಾರ ಘಟನೆಗೆ ಇಲ್ಲಿ ನಿಯೋಜಿಸಿದ್ದ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ಹಿಂಪಡೆದಿರುವುದೇ ಕಾರಣ ಎಂದು ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದ್ದು, ಈ ಪ್ರದೇಶದಲ್ಲಿ ಮತ್ತೆ ಪೊಲೀಸ್ ಭದ್ರತೆ ಒದಗಿರುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಇಸ್ರೇಲಿ ಪ್ರವಾಸಿಗರೊಬ್ಬರು ಹಾಗೂ ಹೋಮ್ ಸ್ಟೇ ಮಾಲಕಿಯ ಮೇಲೆ ನಡೆದ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣ ಅತ್ಯಂತ ಹೀನ ಕೃತ್ಯವಾಗಿದೆ. ಘಟನೆ ಕುರಿತು ವರದಿ ಪಡೆದು ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಅದರಂತೆ ಪೊಲೀಸ್ ಅಧಿಕಾರಿಗಳು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದರು.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಸರ್ಕಾರದಲ್ಲಿ ನಾನು ಅಖಂಡ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಅವರ ಸಹಕಾರದೊಂದಿಗೆ ಹಂಪಿಯಲ್ಲಿ ಪೊಲೀಸ್ ಸಬ್ ಡಿವಿಷನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಡಿವೈಎಸ್ಪಿ ಮಟ್ಟದ ಅಧಿಕಾರಿಯನ್ನು ನೇಮಿಸಿ 32 ಪೊಲೀಸ್ ತಂಡಗಳನ್ನು ರಚಿಸಿ ಅವರಿಗೆ ದ್ವಿಚಕ್ರ ವಾಹನವನ್ನು ನೀಡಲಾಗಿತ್ತು.
ಈ ಮೂಲಕ ಹಂಪಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಆನೆಗೊಂದಿ ಸಹ ಒಳಗೊಂಡಿರುವ ಕಾರಣ ಎರಡು ಐತಿಹಾಸಿಕ ಸ್ಥಳಗಳಿಗೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರ ರಕ್ಷಣೆಗೆ ಹಗಲಿರುಳು ಗಸ್ತು ತಿರುಗುವ ಉತ್ತಮ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇದೀಗ ದುರಾದೃಷ್ಟಕರ ಸಂಗತಿ ಎಂದರೆ ನಂತರ ಬಂದ ಸರ್ಕಾರ ಆ ಪೊಲೀಸ್ ಸಬ್ ಡಿವಿಷನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಅದನ್ನು ಬೇರೆಡೆಗೆ ಸ್ಥಳಾಂತರಗೊಳಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಅತ್ಯಂತ ನಮ್ರವಾಗಿ ವಿನಂತಿಸುತ್ತಾ, ಹಂಪಿ ಹಾಗೂ ಆನೆಗೊಂದಿಗೆ ಆಗಮಿಸುವ ಪ್ರವಾಸಿಗರ ರಕ್ಷಣೆಗಾಗಿ ಈ ಹಿಂದೆ ಕಲ್ಪಿಸಲಾಗಿದ್ದ ಪೊಲೀಸ್ ಸಬ್ ಡಿವಿಷನ್ ಹಂಪಿಯಲ್ಲಿ ಪುನಃ ಸ್ಥಾಪಿಸಬೇಕು. ಜೊತೆಗೆ ಆನೆಗೊಂದಿಯಲ್ಲಿ ಪ್ರತ್ಯೇಕ ಪೊಲೀಸ್ ಠಾಣೆ ನಿರ್ಮಿಸಿ ಉತ್ತಮ ಭದ್ರತಾ ವ್ಯವಸ್ಥೆ ಕಲ್ಪಿಸಬೇಕೆಂದು ಎಂದು ಕೋರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4