ಕೊರಟಗೆರೆ: ಕರುನಾಡಿನ ಸುಪ್ರಸಿದ್ದ ಪುಣ್ಯ ಕ್ಷೇತ್ರವಾದ ಸಿದ್ದರಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ತೋವಿನಕೆರೆ–ತುಂಬಾಡಿ ಮಾರ್ಗದ ಪಿಡಬ್ಲ್ಯೂಡಿ ಇಲಾಖೆಯ 2 ಕಿ.ಮೀ. ಮುಖ್ಯರಸ್ತೆಯಲ್ಲಿ ಬರೋಬ್ಬರಿ 400 ಕ್ಕೂ ಅಧಿಕ ಗುಂಡಿಗಳು ಬಿದ್ದು ಮುಖ್ಯ ರಸ್ತೆಯೇ ಕಾಣೆಯಾಗಿ ವಾಹನ ಸವಾರರಿಗೆ ಉಂಟಾಗಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟದಿಂದ ನೇಗಲಾಲದ ಸಂಪರ್ಕದ 2 ಕಿ.ಮೀ. ರಸ್ತೆಯು ಗುಂಡಿಮಯ ಆಗಿರುವ ಪರಿಣಾಮ ಸಸ್ಯಕಾಶಿಗೆ ಆಗಮಿಸುವ ಪ್ರವಾಸಿಗರಿಗೆ, ರೈತಾಪಿವರ್ಗಕ್ಕೆ ಮತ್ತು ಶಾಲೆಗೆ ತೆರಳುವ ಮಕ್ಕಳಿಗೆ ಪ್ರತಿನಿತ್ಯವು ಸಮಸ್ಯೆಯಾಗಿ ಪರಿಣಮಿಸಿದೆ.
ಮುಖ್ಯರಸ್ತೆ ಕಾಮಗಾರಿಯಲ್ಲಿ ಗುತ್ತಿಗೆದಾರನ ಅಕ್ರಮ:
ತೋವಿನಕೆರೆಯಿಂದ ಜೋನಿಗರಹಳ್ಳಿ ಮಾರ್ಗವಾಗಿ ಸಿದ್ದರಬೆಟ್ಟ ಮೂಲಕ ತುಂಬಾಡಿ ಸಂಪರ್ಕ ಕಲ್ಪಿಸುವ ರಸ್ತೆಗೆ ಮತದಾರರ ಮನವಿಯಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಪಿಡಬ್ಲ್ಯೂಡಿ ಇಲಾಖೆಯಿಂದ 5 ಕೋಟಿ ಅನುದಾನ ನೀಡಿ ಸಮಗ್ರ ಅಭಿವೃದ್ದಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಗುತ್ತಿಗೆದಾರ ಮತ್ತು ಅಧಿಕಾರಿವರ್ಗ 2 ಕಿ.ಮೀ. ರಸ್ತೆಯನ್ನೇ ನಿರ್ಮಿಸದೇ ಇರೋದು ಬೆಳಕಿಗೆ ಬಂದಿದೆ.
ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ:
5 ಕೋಟಿ ಅನುದಾನ ನೀಡಿದ್ರು, ರಸ್ತೆ ಕಾಮಗಾರಿ ಪೂರ್ಣಗೊಳಿಸದೇ ಅಧಿಕಾರಿಗಳೇ ಪರೋಕ್ಷವಾಗಿ ಅಕ್ರಮಕ್ಕೆ ಸಾಥ್ ನೀಡಿದ್ದಾರೆ. ನೇಗಲಾಲದಿಂದ ಸಿದ್ದರಬೆಟ್ಟಕ್ಕೆ ಸಂಪರ್ಕದ 2 ಕಿ.ಮೀ. ರಸ್ತೆಗೆ ಅನುದಾನ ತರುವಲ್ಲಿಯೂ ಮೀನಾಮೇಷ ಎಣಿಸುತ್ತಿದ್ದಾರೆ. ಗೃಹ ಸಚಿವರಿಗೆ ಈಗ ಅನುದಾನ ಕೇಳಿದರೆ ಛೀಮಾರಿ ಹಾಕೋದು ಗ್ಯಾರಂಟಿ ಎಂಬುದು ಅಧಿಕಾರಿಗಳಿಗೂ ಗೊತ್ತಿರುವ ಕಾರಣ ರಸ್ತೆ ಅಭಿವೃದ್ದಿಯು ಸ್ಥಗಿತವಾಗಿದೆ.
ಅಧಿಕಾರಿಗಳಿಗೆ ನೇಗಲಾಲ ಗ್ರಾಮಸ್ಥರಿಂದ ಹಿಡಿಶಾಪ:
ಸಿದ್ದರಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಜನ ಭಕ್ತರು ಇದೇ ಮಾರ್ಗವಾಗಿ ಸಂಚಾರ ಮಾಡ್ತಾರೇ. ಸಾವಿರಾರು ಜನ ಬಡಮಕ್ಕಳು ವ್ಯಾಸಂಗ ಮಾಡುವ ವಸತಿಶಾಲೆ, ಸಿದ್ದರಬೆಟ್ಟ ಶ್ರೀಮಠಕ್ಕೆ ಬರುವ ಭಕ್ತರು ಸೇರಿದಂತೆ ಸಾವಿರಾರು ಜನರ ಸಂಚಾರ ಅಡಚಣೆಯಾಗಿ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಸರ್ವೇಸಾಮಾನ್ಯ ಆಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx