ಬೆಂಗಳೂರು: ಸಚಿವ ಎಚ್.ಸಿ.ಮಹದೇವಪ್ಪ ಅವರ ಇತ್ತೀಚಿನ ಹೇಳಿಕೆಗಳು ಹಾಗೂ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸರ್ಕಾರಿ ಜಮೀನು ಬಳಕೆ ಮಾಡುತ್ತಿರುವ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.
ಮಹದೇವಪ್ಪ ಹೈಕಮಾಂಡ್ ಭಾಗ: ಅಧಿಕಾರ ಹಂಚಿಕೆ ವಿಚಾರವಾಗಿ ಸಚಿವ ಎಚ್.ಸಿ. ಮಹದೇವಪ್ಪ ನೀಡಿರುವ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ಮಹದೇವಪ್ಪ ಅವರು ಹಿರಿಯ ನಾಯಕರು ಮತ್ತು ಈಗ ಅವರು ನಮ್ಮ ಹೈಕಮಾಂಡ್‌ನ ಭಾಗವಾಗಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ನಾಯಕತ್ವದ ಬದಲಾವಣೆ ಅಥವಾ ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್, ಸಿಎಂ ಸಿದ್ದರಾಮಯ್ಯ ಮತ್ತು ನಾನು ಸೇರಿ ಈಗಾಗಲೇ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಸಮಯ ಬಂದಾಗ ಮುಖ್ಯಮಂತ್ರಿಗಳೇ ಎಲ್ಲವನ್ನೂ ಬಹಿರಂಗಪಡಿಸಲಿದ್ದಾರೆ. ಇದು ಕದ್ದುಮುಚ್ಚಿ ಮಾಡುವ ವ್ಯವಹಾರವಲ್ಲ,” ಎಂದರು.
ಕಾಂಗ್ರೆಸ್ ಭವನಕ್ಕೆ ಜಾಗ — ಬಿಜೆಪಿಗೆ ಟಾಂಗ್:
ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಜಮೀನು ಮಂಜೂರು ಮಾಡುತ್ತಿರುವ ಬಗ್ಗೆ ಬಿಜೆಪಿಯ ಟೀಕೆಗಳಿಗೆ ತಿರುಗೇಟು ನೀಡಿದ ಅವರು, “ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾದ ಶತಮಾನೋತ್ಸವದ ನೆನಪಿಗಾಗಿ ರಾಜ್ಯದ 100 ಕಡೆ ಕಾಂಗ್ರೆಸ್ ಭವನ ನಿರ್ಮಾಣ ಮಾಡುತ್ತಿದ್ದೇವೆ. ಇದಕ್ಕಾಗಿ 5-10 ಸಾವಿರ ಚದರ ಅಡಿ ಜಾಗ ನೀಡುತ್ತಿರುವುದು ನಿಜ. ಬಿಜೆಪಿ ಅವಧಿಯಲ್ಲಿ ಚಾಣಾಕ್ಯ ವಿವಿ ಮತ್ತು ಆರ್‌ಎಸ್ಎಸ್ ಕಚೇರಿಗಳಿಗೆ ನೂರಾರು ಎಕರೆ ಬೆಲೆಬಾಳುವ ಜಮೀನನ್ನು ಕಡಿಮೆ ದರಕ್ಕೆ ನೀಡಲಾಗಿತ್ತು. ಅವರು ನಮಗೆ ಬೋಧನೆ ಮಾಡುವ ಅಗತ್ಯವಿಲ್ಲ. ನಮ್ಮ ಪಕ್ಷದ ದೇವಾಲಯ ಕಟ್ಟಲು ನಾವು ಈ ನಿರ್ಧಾರ ಮಾಡಿದ್ದೇವೆ, ಇದಕ್ಕೆ ಯಾರಾದರೂ ಕೋರ್ಟ್‌ಗೆ ಹೋಗುವುದಿದ್ದರೆ ಹೋಗಲಿ,” ಎಂದು ಸವಾಲು ಹಾಕಿದರು.
ಶಾಸಕರ ವಿದೇಶ ಪ್ರವಾಸ:
ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ ಡಿಕೆಶಿ, “ಇದು ಅವರ ವೈಯಕ್ತಿಕ ಪ್ರವಾಸವೋ ಅಥವಾ ಬೇರೆ ಯಾರಾದರೂ ಕಳುಹಿಸುತ್ತಿದ್ದಾರೋ ಗೊತ್ತಿಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ,” ಎಂದು ತಿಳಿಸಿದರು.
ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿರುವ ನಾಯಕತ್ವ ಬದಲಾವಣೆ ಮತ್ತು ಜಮೀನು ಮಂಜೂರಾತಿ ವಿಚಾರವಾಗಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


