ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡುವ ಮೂಲಕ ಇಬ್ಬರ ನಡುವೆ ಟ್ವಿಟರ್ ವಾಗ್ವಾದ ನಡೆದಿತ್ತು.
ಇದೀಗ ಭಾಷೆಗಳ ನಡುವೆ ವಿವಾದ ಹುಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನೀಡಿರುವ ಹೇಳಿಕೆಯನ್ನು ಸ್ವಾಗತಿಸುವುದಾಗಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
“ಹಿಂದಿ ಭಾಷೆಯ ಕುರಿತು ನಾನು ಯಾವುದೇ ಜಗಳ ಅಥವಾ ಯಾವುದೇ ರೀತಿಯ ಚರ್ಚೆ ಹುಟ್ಟುಹಾಕಬೇಕೆಂಬ ಉದ್ದೇಶ ಹೊಂದಿರಲಿಲ್ಲ. ಇದೊಂದು ಅಜೆಂಡಾ ಇಲ್ಲದ ಪ್ರತಿಕ್ರಿಯೆಯಾಗಿತ್ತು. ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಹೇಳಿರುವ ಮಾತುಗಳನ್ನು ಕೇಳಿಸಿಕೊಳ್ಳುವುದು ನಮಗೊಂದು ಗೌರವ ಮತ್ತು ಸೌಭಾಗ್ಯವಾಗಿದೆ” ಎಂದು ಕಿಚ್ಚ ಸುದೀಪ್ ಎನ್ ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಮ್ಮ ಮಾತೃಭಾಷೆಯನ್ನು ಗೌರವದಿಂದ ಕಾಣುವ ಪ್ರತಿಯೊಬ್ಬರಿಗೂ ಪ್ರಧಾನಿಯವರ ಹೇಳಿಕೆಯಿಂದ ಅತೀವ ಸಂತಸ ತಂದಿದೆ. ಎಲ್ಲಾ ಪ್ರಾದೇಶಿಕ ಭಾಷೆಗಳು ಪೂಜನೀಯ ಎಂಬ ಪ್ರಧಾನಿಯವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5