ಚಂದಿರನ ಅಂಗಳದ ಸಂಚರಿಸುತ್ತಿರುವ ಚಂದ್ರಯಾನ-3 ಯೋಜನೆಯ ಪ್ರಗ್ಯಾನ್ ರೋವರ್ ಗೆ ನಾಲ್ಕು ಮೀಟರ್ ವ್ಯಾಸದ ದೊಡ್ಡ ಕುಳಿಯೊಂದು ಎದುರಾಗಿದೆ ಎಂದು ಇಸ್ರೋ ಸೋಮವಾರ ತಿಳಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಇಸ್ರೋ, “ಚಂದ್ರಯಾನ-3 ಮಿಷನ್: ಆಗಸ್ಟ್ 27, 2023 ರಂದು ರೋವರ್ ಗೆ ತನ್ನ ಸ್ಥಳದಿಂದ 3 ಮೀಟರ್ ದೂರದಲ್ಲಿ 4 ಮೀಟರ್ ವ್ಯಾಸದ ಕುಳಿ ಇರುವುದನ್ನು ಗುರುತಿಸಿದೆ. ಹೀಗಾಗಿ, ರೋವರ್ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.
ಇದೀಗ ರೋವರ್ ಸುರಕ್ಷಿತವಾಗಿ ಹೊಸ ಹಾದಿಯಲ್ಲಿ ಸಾಗುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇಂದು ಮಧ್ಯಾಹ್ನ ಇಸ್ರೋ ನಿಯಂತ್ರಣ ಕೊಠಡಿಗೆ ಪ್ರಗ್ಯಾನ್ ರೋವರ್ ತನಗೆ ಗುಂಡಿಯೊಂದು ಎದುರಾಗಿರುವ ಕುರಿತು ಮಾಹಿತಿ ನೀಡಿತ್ತು.
ಆ ನಂತರ ಸಕ್ರಿಯರಾದ ತಜ್ಞರ ತಂಡ ರೋವರ್ ಗೆ ಹೊಸ ಮಾರ್ಗವನ್ನು ಸೂಚಿಸಿದೆ. ನಂತರ ರೋವರ್ ನ ಬದಲಾದ ಮಾರ್ಗದ ಫೋಟೋ ಸಮೇತ ಇಸ್ರೋ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.


