ಹೊಸ ವರ್ಷ ಆಚರಣೆಗೆ ಆಗಮಿಸಿದ್ದ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರರವರ ಫೋಟೋಗ್ರಾಫರ್ ಪ್ರಸನ್ನ ಭಟ್ (26) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿತ್ತು. ಪಾರ್ಥಿವ ಶರೀರ ಇಂದು ಸಂಜೆ 5 ಗಂಟೆಗೆ ಹೊಸನಗರ ಪಟ್ಟಣದಲ್ಲಿರುವ ಮೃತನ ಸ್ವಗೃಹ ತಲುಪಲಿದೆ ಎಂದು ತಿಳಿದು ಬಂದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿತ್ತು. ಸಂಸದ ರಾಘವೇಂದ್ರ ದೆಹಲಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಪ್ರಸನ್ನ ಭಟ್ ರಜೆಯಲ್ಲಿದ್ದರು. ಭಾನುವಾರ ಸಂಜೆ ರಾಮೇಶ್ವರಕ್ಕೆ ತೆರಳಬೇಕಿದ್ದ ಅವರು ಸಮಯವಿದ್ದ ಕಾರಣ ಆರು ಮಂದಿ ಸ್ನೇಹಿತರೊಂದಿಗೆ ಬೆಳಗ್ಗೆ ಕನಕಪುರದಲ್ಲಿರುವ ಸ್ನೇಹಿತ ಕೌಶಿಕ್ ರವರ ಮನೆಗೆ ಬಂದಿದ್ದರು.
ಮಾವತ್ತೂರು ಕೆರೆಯಲ್ಲಿ ಈಜಲು ಪ್ರಸನ್ನ ಮತ್ತು ಸ್ನೇಹಿತರು ನೀರಿಗೆ ಇಳಿದಿದ್ದಾರೆ. ಈಜಲು ಬಾರದ ಕಾರಣ ಕೌಶಿಕ್ ನೀರಿಗೆ ಇಳಿದಿರಲಿಲ್ಲ. ಈಜಲು ಹೋದ ಪ್ರಸನ್ನ ಭಟ್ ನೀರಿನಿಂದ ಮೇಲಕ್ಕೆ ಬರಲೇ ಇಲ್ಲ. ಇದರಿಂದ ಗಾಬರಿಗೊಂಡ ಕೌಶಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಸನ್ನ ಭಟ್ಗಾಗಿ ಶೋಧ ಕಾರ್ಯ ನಡೆಸಿದರೂ ಪ್ರಯೋಜನವಾಗಲಿಲ್ಲ. ಆ ನಂತರ ಅಗ್ನಿ ಶಾಮಕ ದಳ ಸಿಬ್ಬಂದಿ ಪ್ರಸನ್ನ ಭಟ್ಗಾಗಿ ಶೋಧ ಕಾರ್ಯ ಮುಂದುವರೆಸಿ ಶವ ಹೊರಕ್ಕೆ ತೆಗೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.
ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ ಸ್ಟಾಗ್ರಾಂನಲ್ಲಿ ಮಾವತ್ತೂರು ಕೆರೆಯ ವಿಡಿಯೋ ನೋಡಿದ್ದರು. ಹಾಗಾಗಿ ಅಲ್ಲಿಗೆ ಹೋಗಿದ್ದರು ಎಂದು ತಿಳಿದುಬಂದಿದೆ.ವಿದ್ಯಾರ್ಥಿ ದೆಸೆಯಿಂದಲೆ ಪತ್ರಿಕೋದ್ಯಮದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ವಿಶ್ವವಾಣಿ ಪತ್ರಿಕೆಯ ಹೊಸನಗರ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದರು.
ಆ ಬಳಿಕ ಸಂವಾದ ಡಿಜಿಟಲ್ ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ್ದರು.ಫೋಟೋಗ್ರಫಿ, ವಿಡಿಯೋಗ್ರಫಿಯಲ್ಲಿ ನಿಪುಣರಾಗಿದ್ದ ಇವರು ಕೆಲ ವರ್ಷದಿಂದ ಸಂಸದ ಬಿ.ವೈ.ರಾಘವೇಂದ್ರ ಅವರ ಫೋಟೊಗ್ರಾಫರ್ ಆಗಿ ಕಾರ್ಯ ನಿರ್ಹಿಸುತ್ತಿದ್ದರು. ಸಂಸದ ರಾಘವೇಂದ್ರ ಅವರ ಸಾಮಾಜಿಕ ಜಾಲತಾಣಗಳು, ಮೀಡಿಯಾ ವಿಭಾಗವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದರು. ಇದೆ ಕಾರಣಕ್ಕೆ ಅವರು ಸಂಸದ ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದವರಿಗೆ ಆಪ್ತರಾಗಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


