ಮನೆಯವರ ವಿರೋಧದ ನಡುವೆ ಮದುವೆ ಆಗಿದ್ದ ಪ್ರೇಮಿಗಳನ್ನು ಮತ್ತೆ ಒಂದು ಮಾಡುವುದಾಗಿ ಕರೆಸಿ ಯುವತಿಯ ಮನೆಯವರು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆಯ ಬೇವಿನಮಟ್ಟಿ ಗ್ರಾಮದ ವಿಶ್ವನಾಥ್ ನೆಲಗಿ (24) ಹಾಗೂ ರಾಜೇಶ್ವರಿ (18) ಹತ್ಯೆಯಾದ ಪ್ರೇಮಿಗಳಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳಾದ ರವಿ ಹುಲ್ಲನ್ನವರ, ಹನುಮಂತ ಮಲ್ಲಾಡದ, ಬೀರಪ್ಪ ದಳವಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇನ್ನುಳಿದ ಆರೋಪಿಗಳು ಹಾಗೂ ಹತ್ಯೆಯಾದ ಪ್ರೇಮಿಗಳ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ವಿಶ್ವನಾಥ್ ಹಾಗೂ ರಾಜೇಶ್ವರಿ ಸುಮಾರು ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ರಾಜೇಶ್ವರಿಯ ಮನೆಯವರಿಗೆ ತಿಳಿದು ವಿಶ್ವನಾಥ್ ಮೇಲೆ 2 ಹಲ್ಲೆ ಮಾಡಿದ್ದರು. ಆದರೆ ಇಬ್ಬರು ಒಂದಾಗಿದ್ದರು.
ವಿಶ್ವನಾಥ್ ಕೂಲಿ ಕೆಲಸಕ್ಕೆಂದು ಕೇರಳದ ಕಾಸರಗೋಡಿಗೆ ಹೋಗಿದ್ದ. ಆದರೆ ರಾಜೇಶ್ವರಿಯ ತಂದೆ ಪರಸಪ್ಪ ಕರಡಿ ಇಬ್ಬರನ್ನೂ ಒಂದು ಮಾಡಿಸುವುದಾಗಿ ನಂಬಿಸಿ, ಊರಿಗೆ ಬರುವಂತೆ ಹೇಳಿ ಕಳುಹಿಸಿದ್ದಾರೆ. ಆದರೆ ವಿಶ್ವನಾಥ್ ನರಗುಂದ ಬಳಿ ಬರುತ್ತಿದ್ದಂತೆ ಆತನನ್ನು ಬೊಲೆರೊ ವಾಹನದಲ್ಲಿ ಅಪಹರಿಸಿದ್ದಾರೆ.
ಅಕ್ಟೋಬರ್ 1 ರಂದು ನಸುಕಿನ ಜಾವ ಟಂಟಂ ಏಸ್ ವಾಹನದಲ್ಲಿ ರಾಜೇಶ್ವರಿಯ ಕುತ್ತಿಗೆಗೆ ವೇಲ್ ಬಿಗಿದು ಕೊಲೆ ಮಾಡಿರುವ ದುಷ್ಕರ್ಮಿಗಳು ಪ್ರಿಯಕರ ವಿಶ್ವನಾಥ್ ನನ್ನು ಬೊಲೆರೊ ವಾಹನದಲ್ಲಿ ಮರ್ಮಾಂಗ ಹಾಗೂ ಎದೆಗೆ ಕಲ್ಲಿನಿಂದ ಹೊಡೆದು ಹತ್ಯೆಗೈದಿದ್ದಾರೆ.
ಇಬ್ಬರನ್ನು ಹತ್ಯೆ ಮಾಡಿದ ನಂತರ ದುಷ್ಕರ್ಮಿಗಳು ಮೃತ ದೇಹಗಳ ಮೇಲಿದ್ದ ಬಟ್ಟೆಗಳನ್ನು ತೆಗೆದು ಹುನಗುಂದ ಎನ್‌ಹೆಚ್ 50ಯ ಕೃಷ್ಣಾ ನದಿಯಲ್ಲಿ ಎಸೆದಿದ್ದಾರೆ. ನಂತರ ಅವರಿಬ್ಬರ ಬಟ್ಟೆಗಳನ್ನು ಸಂಗಮ ಕ್ರಾಸ್ ಬಳಿ ಸುಟ್ಟು ಹಾಕಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


