ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2026-27ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಮದ್ಯ ಪ್ರಿಯರಿಗೆ ಭಾರಿ ಶಾಕ್ ನೀಡಿದ್ದಾರೆ. ರಾಜ್ಯದ ಇತಿಹಾಸದಲ್ಲೇ ದಾಖಲೆಯ 17ನೇ ಬಾರಿಗೆ ಬಜೆಟ್ ಮಂಡಿಸಿದ ಸಿಎಂ, ಮದ್ಯದ ಮೇಲಿನ ತೆರಿಗೆ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಘೋಷಿಸಿದ್ದಾರೆ.
ಆಲ್ಕೋಹಾಲ್ ಆಧಾರಿತ ತೆರಿಗೆ: ಇನ್ನು ಮುಂದೆ ಮದ್ಯದ ಬೆಲೆಯ ಮೇಲೆ ಮಾತ್ರವಲ್ಲದೆ, ಆ ಪಾನೀಯದಲ್ಲಿರುವ ಆಲ್ಕೋಹಾಲ್ ಅಂಶವನ್ನು (Alcohol-in-Beverage – AIB) ಆಧರಿಸಿ ಅಬಕಾರಿ ಸುಂಕ ವಿಧಿಸಲಾಗುತ್ತದೆ. ಇದನ್ನು ಜಾಗತಿಕ ‘ಗೋಲ್ಡ್ ಸ್ಟ್ಯಾಂಡರ್ಡ್’ ಪದ್ಧತಿ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಹಂತ ಹಂತವಾಗಿ ಏರಿಕೆ: ಎಕ್ಸ್-ಫ್ಯಾಕ್ಟರಿ ದರಪಟ್ಟಿಯ ಆಧಾರದ ಮೇಲೆ ಮದ್ಯದ ಬೆಲೆಯನ್ನು ಒಂದೇ ಬಾರಿಗೆ ಹೆಚ್ಚಿಸುವ ಬದಲು, ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಏರಿಸಲು ಸರ್ಕಾರ ನಿರ್ಧರಿಸಿದೆ.
ಸ್ಲ್ಯಾಬ್ ಗಳ ಕಡಿತ: ಮದ್ಯದ ದರ ನಿಗದಿಯನ್ನು ಸುಗಮಗೊಳಿಸಲು ಪ್ರಸ್ತುತ ಇರುವ 16 ಸ್ಲ್ಯಾಬ್‌ಗಳನ್ನು 8 ಸ್ಲ್ಯಾಬ್‌ಗಳಿಗೆ ಇಳಿಸಲು ತೀರ್ಮಾನಿಸಲಾಗಿದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳನ್ನು ಸ್ಲ್ಯಾಬ್‌ಗಳಲ್ಲಿ ಇರಿಸುವ ಅಧಿಕಾರವನ್ನು ಉತ್ಪಾದಕರಿಗೆ ನೀಡಲಾಗಿದೆ.
ಆದಾಯದ ಗುರಿ: 2026-27ನೇ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ ಒಟ್ಟು 45,000 ಕೋಟಿ ರೂಪಾಯಿ ರಾಜಸ್ವ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಕಳೆದ ಸಾಲಿನಲ್ಲಿ (ಫೆಬ್ರವರಿ ಅಂತ್ಯದವರೆಗೆ) 36,492 ಕೋಟಿ ರೂ. ಸಂಗ್ರಹವಾಗಿತ್ತು.
ತಂತ್ರಜ್ಞಾನದ ಬಳಕೆ: ತೆರಿಗೆ ಸೋರಿಕೆ ತಡೆಯಲು ‘ಬ್ಲಾಕ್‌ಚೈನ್ ಡಿಜಿಟಲ್ ಟ್ರ್ಯಾಕಿಂಗ್’ ವ್ಯವಸ್ಥೆ ಮತ್ತು ಮದ್ಯದ ರವಾನೆಯ ಮೇಲ್ವಿಚಾರಣೆಗಾಗಿ ‘ಜಿಯೋ-ಫೆನ್ಸ್ ಇ-ಲಾಕ್’ (Geo-fence e-lock) ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
ಯಾವಾಗಿನಿಂದ ಜಾರಿ?
ಹೊಸ ಅಬಕಾರಿ ಸುಂಕ ವ್ಯವಸ್ಥೆಯು ಏಪ್ರಿಲ್ 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಮದ್ಯದ ಬೆಲೆಯಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆಯಿದೆ. ಮದ್ಯಪಾನದ ದುಷ್ಪರಿಣಾಮಗಳನ್ನು ತಗ್ಗಿಸುವುದು ಮತ್ತು ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರುವುದು ಈ ಸುಧಾರಣೆಗಳ ಮುಖ್ಯ ಉದ್ದೇಶ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


