ಕೇರಳ: ಕೇರಳದ ಗುರುವಾಯೂರಿನಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಮೋದಿ ಸಾಂಪ್ರದಾಯಿಕ ಮಲಯಾಳಿ ಶೈಲಿಯಲ್ಲಿ ಬಿಳಿ ಮುಂಡು, ಶರ್ಟ್ ಮತ್ತು ಶಾಲು ಧರಿಸಿದ್ದರು.
ಗುರುವಾಯೂರು ದೇವಾಲಯದಲ್ಲಿ ನಡೆದ ಬಿಜೆಪಿ ನಾಯಕ , ನಟ ಸುರೇಶ್ ಗೋಪಿ ಅವರ ಮಗಳು ಭಾಗ್ಯಾ ಸುರೇಶ್ ಅವರ ಮದುವೆಯಲ್ಲಿ ಮೋದಿ ಭಾಗಿಯಾಗಿದ್ದಾರೆ. ಮದುವೆಯಲ್ಲಿ ತಾಳಿ ಕಟ್ಟಿದ ನಂತರ ನವ ದಂಪತಿಗಳು ಪರಸ್ಪರ ಹಾರ ಬದಲಾಯಿಸುವಾಗ ಮೋದಿಯವರೇ ದಂಪತಿ ಕೈಗೆ ಹಾರ ಕೊಟ್ಟಿದ್ದಾರೆ.
ಸುರೇಶ್ ಗೋಪಿ ಅವರ ಮಗಳ ಮದುವೆಗೂ ಮುನ್ನ ಬೆಳಗ್ಗೆ ದೇವಸ್ಥಾನದಲ್ಲಿ, ವಿವಾಹವಾದ ದಂಪತಿಗಳಿಗೆ ಪ್ರಧಾನಿ ಆಶೀರ್ವದಿಸಿ ಸಿಹಿತಿಂಡಿಗಳನ್ನು ನೀಡಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಾಲಯಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ಬೆಳಗ್ಗೆ 7.35ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಗುರುವಾಯೂರಿಗೆ ಆಗಮಿಸಿದ ಪ್ರಧಾನಿ ಮೋದಿ ಶ್ರೀಕೃಷ್ಣ ಕಾಲೇಜು ಮೈದಾನದಲ್ಲಿ ಬಂದಿಳಿದಿದ್ದು, ನೂರಾರು ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ಅವರನ್ನು ಸ್ವಾಗತಿಸಲು ಗಂಟೆಗಟ್ಟಲೆ ಜಮಾಯಿಸಿದ್ದರು. ಎಲ್ಲಾ ವಯಸ್ಸಿನ ಜನರು ಹೆಲಿಪ್ಯಾಡ್ ನಲ್ಲಿ ಬಿಜೆಪಿ ಧ್ವಜಗಳನ್ನು ಬೀಸುತ್ತಾ ಮತ್ತು ಪಕ್ಷದ ಬಣ್ಣಗಳಲ್ಲಿ ಟೋಪಿಗಳು ಮತ್ತು ಕ್ಯಾಪ್ಗಳನ್ನು ಧರಿಸಿ ಪ್ರಧಾನಿಯನ್ನು ಸ್ವಾಗತಿಸಿದರು.
ಹೆಲಿಪ್ಯಾಡ್ನಿಂದ ಶ್ರೀವಲ್ಸಮ್ ಗೆಸ್ಟ್ ಹೌಸ್ ಗೆ ತೆರಳಿದ ಪ್ರಧಾನಿ ಮೋದಿ ಅಲ್ಲಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ತೆರಳುವ ಮುನ್ನ ಕೇರಳದ ಸಾಂಪ್ರದಾಯಿಕ ಉಡುಗೆಯನ್ನು ಬದಲಾಯಿಸಿಕೊಂಡರು.
ಕೊಚ್ಚಿ ತಲುಪಿದ ನಂತರ ಪ್ರಧಾನಮಂತ್ರಿಯವರು ವಿಲ್ಲಿಂಗ್ಡನ್ ದ್ವೀಪದಲ್ಲಿ ಕೊಚ್ಚಿ ಅಂತರಾಷ್ಟ್ರೀಯ ಹಡಗು ದುರಸ್ತಿ ಕೇಂದ್ರ, ಡ್ರೈ ಡಾಕ್ ಮತ್ತು IOC ಯ LPG ಆಮದು ಟರ್ಮಿನಲ್ ಅನ್ನು ಉದ್ಘಾಟಿಸಿದರು.


