ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ತುಂಬು ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆಗೆ ಗಲ್ಲು ಶಿಕ್ಷೆ ನೀಡಬೇಕೆಂದು ದಲಿತ ಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿ ತಹಶೀಲ್ದಾರ್ ಮುಖೇನಾ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ ತಾಲೂಕಿನ ವೀರಾಪುರ ಗ್ರಾಮದ ಯುವತಿ ಅಂತರ್ಜಾತಿ ವಿವಾಹ ಆಗಿದ್ದಕ್ಕೆ ತಂದೆಯೇ ಮಗಳು 7 ತಿಂಗಳು ತುಂಬು ಗರ್ಭಿಣಿ ಎನ್ನುವುದನ್ನು ನೋಡದೆ ಭೀಕರವಾಗಿ ಕೊಲೆ ಮಾಡಿರುವುದನ್ನು ದಲಿತ ಪರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಭೀಕರವಾಗಿ ಹತ್ಯೆ ಮಾಡಿದ ತಂದೆಗೆ ವಿಶೇಷ ಕಾನೂನು ರಚನೆ ಮಾಡಿ ಗಲ್ಲು ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಮಾದಿಗ ಸಮುದಾಯದ ಯುವಕ ಅಂತರ್ಜಾತಿ ವಿವಾಹವಾಗಿ ಒಂದೂವರೆ ವರ್ಷ ಕಳೆದಿದೆ. ಮಗಳು 7 ತಿಂಗಳ ತುಂಬು ಗರ್ಭಿಣಿ ಎನ್ನುವುದನ್ನು ನೋಡದೆ ಅಂತರ್ಜಾತಿ ವಿವಾಹ ಆಗಿದ್ದಕ್ಕೆ ವಿಕೃತವಾಗಿ ಕೊಲೆ ಮಾಡಿದ ಪಾಪಿ ತಂದೆಗೆ ಸರ್ಕಾರ ವಿಶೇಷ ಕಾನೂನು ರಚಿಸಿ ಗಲ್ಲು ಶಿಕ್ಷೆಗೆ ಗುರಿ ಪಡಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದರು.
ದಲಿತ ಸಂರಕ್ಷಣಾ ಸಮಿತಿ ರಾಜ್ಯ ಸಂಚಾಲಕ ಟೈಗರ್ ನಾಗ್ ಮಾತನಾಡಿ, ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನಲ್ಲಿ ತಂದೆಯೇ ಮಗಳನ್ನು ವಿಕೃತವಾಗಿ ಕೊಲೆ ಮಾಡಿ ನಂತರ ದಲಿತ ಸಮುದಾಯ ಯುವಕನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಬಸವಣ್ಣನವರು ಸಮ ಸಮಾಜ ನಿರ್ಮಾಣಕ್ಕೆ ಸಂದೇಶ ನೀಡಿದ್ದರು, ಘೋರ ಘಟನೆಗಳು ರಾಜ್ಯದಲ್ಲಿ ನಡೆಯುತ್ತಲೆ ಇವೆ, ಈ ಪ್ರಕರಣಕ್ಕೆ ಗೃಹ ಇಲಾಖೆ ವಿಶೇಷ ಕಾನೂನು ರಚಿಸಿ ಪಾಪಿ ತಂದೆಗೆ ಗಲ್ಲು ಶಿಕ್ಷೆ ಸಿಗುವಂತೆ ಮಾಡಿ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಪರ ಸಂಘಟನೆಯ ಗೋಪಿನಾಥ್, ಪುಟ್ಟಸಂದ್ರ ಭೀಮಣ್ಣ, ದೊಡ್ಡಯ್ಯ, ನಾಗಣ್ಣ, ಪುಟ್ಟರಾಜು, ಗೊಂದಿಹಳ್ಳಿ ಭೀಮರಾಜು ಸೇರಿದಂತೆ ಇತರರು ಹಾಜರಿದ್ದರು.
ಹುಬ್ಬಳ್ಳಿಯಲ್ಲಿ ತಂದೆಯೇ ಮಗಳನ್ನು ಕೊಲೆ ಮಾಡಿರುವ ಬಗ್ಗೆ ದಲಿತ ಪರ ಸಂಘಟನೆ ಒಕ್ಕೂಟ ವಿಶೇಷ ಕಾನೂನು ರಚಿಸಿ ಗಲ್ಲು ಶಿಕ್ಷೆ ನೀಡುವಂತೆ ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದಾರೆ, ಸ್ವಾತಂತ್ರ ಭಾರತದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಇಂತಹ ಘಟನೆಗಳು ನಡೆಯುತ್ತಿರುವುದು ವಿಷಾಧನೀಯ, ವೈಯಕ್ತಿಕವಾಗಿ ನಾನು ಸಹ ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ.
— ಕೆ.ಮಂಜುನಾಥ್. ತಹಶೀಲ್ದಾರ್, ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


