ತುಮಕೂರು: ಇಂದು ತುಮಕೂರಿನ ಸುಧಾ ಟೀ ಹೌಸ್ ನಲ್ಲಿ ಜಿಲ್ಲೆಯ ಪ್ರಗತಿಪರ, ದಲಿತ, ಮಹಿಳಾ ಮತ್ತು ಜೀವಪರ ಸಂಘ ಸಂಸ್ಥೆಗಳು ಹಾಗೂ ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಸಂಯುಕ್ತಾಶ್ರಯದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆ ಖಾಸಗೀಕರಣ ಮಾಡುತ್ತಿರುವ ನಿಲುವು ಖಂಡಿಸಿ ಕೆ.ದೊರೈರಾಜ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲಾಸ್ಪತ್ರೆಯನ್ನು ಖಾಸಗೀಕರಣ ಮಾಡುವ PPP ಮಾದರಿಯನ್ನು ಕೈಬಿಡಲು ಆಗ್ರಹಿಸಿ ಹೋರಾಟ ಸಮಿತಿ ರಚಿಸಿ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿಕ್ಕೆ ಆಗ್ರಹಿಸುವುದು ಸೇರದಂತೆ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಲ್ಲಾ ಪ್ರಗತಿಪರ ಸಂಘಟನೆಗಳಿಂದ ಮನವಿ ನೀಡಲು ಸಭೆಯಲ್ಲಿ ತೀರ್ಮಾನಿಸಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸ್ಲಂಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಆಗ್ರಹಿಸಲಾಯಿತು.
ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಸಂಚಾಲಕರಾದ ಪ್ರಸನ್ನ ಸಾಲಿಗ್ರಾಮ ಮಾತನಾಡಿ, ವಿಶ್ವಸಂಸ್ಥೆ ಐಎಮ್ ಎಫ್ ಹಿತಾಸಕ್ತಿ ಮೇಲೆ ಖಾಸಗೀಕರಣವೆನ್ನುವುದು ಪರಿಚಯವಾಗಿದೆ, ಸರ್ಕಾರಿ ವ್ಯವಸ್ಥೆಯನ್ನು ಖಾಸಗೀಯವರಿಗೆ ನೀಡಿ ಸರ್ಕಾರಿ ಸೇವಾ ನಿರತ ವ್ಯವಸ್ಥೆಯನ್ನು ಖಾಸಗಿ ಬಂಡವಾಳ ಶಾಹಿಗಳಿಗೆ ನೀಡಲಾಗುತ್ತಿದೆ, ಇದಕ್ಕೆ ಸರ್ಕಾರಗಳೂ ಸಹ ಕುಮ್ಮಕ್ಕು ನೀಡುತ್ತಿದ್ದು, ಸಂವಿಧಾನ ವಿರೋಧಿಯ ಹುನ್ನಾರಗಳಿಗೆ ಸರ್ಕಾರಗಳೇ ಬಲಿಯಾಗುತ್ತಿರುವುದು ವಿಪರ್ಯಾಸವಾಗಿದೆ, ಖಾಸಗೀಕರಣದ ವ್ಯಾಮೋಹಕ್ಕೆ ಒಳಗಾಗಿ ಸರ್ಕಾರಗಳು ತಮ್ಮ ಹೊಣೆಗಾರಿಕೆ ಮತ್ತು ಉತ್ತರಾಯಿತ್ವದಿಂದ ನುಣಿಚಿಕೊಳ್ಳುತ್ತಿವೆ. ಇಡೀ ಖಾಸಗಿ ವ್ಯವಸ್ಥೆ ಲಾಭ ಮಾಡುವುದನ್ನು ಬಿಟ್ಟರೇ ಜನರಿಗೆ ಸೇವೆ ನೀಡುವ ಉದ್ದೇಶವಿರುವುದಿಲ್ಲ, ಹಾಗಾಗಿ ಎಲ್ಲಿ ಆರೋಗ್ಯದ ಹಕ್ಕಿಗಾಗಿ ರಾಜಕೀಯ ಹೋರಾಟ ಇರುತ್ತದೆಯೇ ಅಲ್ಲಿ ಸರ್ಕಾರಿ ವ್ಯವಸ್ಥೆ ಇರುತ್ತದೆ. ಎಲ್ಲಿ ವಿರೋಧ ಇರುವುದಿಲ್ಲವೋ ಅಲ್ಲಿ ಖಾಸಗೀಕರಣವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.
ಕರ್ನಾಟಕ ಸರ್ಕಾರವು ಪ್ರಸ್ತುತ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿರದ 11 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳನ್ನು ಸಾರ್ವಜನಿಕ—ಖಾಸಗಿ–ಸಹಭಾಗಿತ್ವ(PPP) ಮಾದರಿಯಲ್ಲಿ 11 ಹೊಸ ವೈದ್ಯಕೀಯ ಕಾಲೇಜ್ ನ್ನು ಸ್ಥಾಪಿಸಲು ಯೋಚಿಸುತ್ತಿದೆ. ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ವಿಜಯಪುರ, ವಿಜಯನಗರ, ಮತ್ತು ರಾಮನಗರ ಜಿಲ್ಲೆಗಳು ಈ ಪಟ್ಟಿಯಲ್ಲಿದ್ದು, 2019ರಲ್ಲಿ ಕೇಂದ್ರ ನೀತಿ ಆಯೋಗದ ಶಿಫಾರಸ್ಸು ಮತ್ತು ಮಾರ್ಗದರ್ಶಿ ತತ್ವಗಳ ಹಿನ್ನೆಲೆಯಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆಗೆ ಸಂಪನ್ಮೂಲಗಳು ಮತ್ತು ಹಣಕಾಸಿನ ಕ್ರೂಢೀಕರಣಕ್ಕಾಗಿ ಖಾಸಗಿ ಸಂಸ್ಥೆಗಳಿಗೆ ಬಿಟ್ಟುಕೊಡುವುದು ದುರಾದೃಷ್ಠಕರವಾಗಿದೆ, ಹಾಗಾಗಿ ತುಮಕೂರು ಜಿಲ್ಲೆಯ ನಾಗರಿಕ ಸಂಘಟನೆಗಳು ಸರ್ಕಾರಿ ಜಿಲ್ಲಾ ಆಸ್ಪತ್ರೆಯನ್ನು ಉಳಿಸಿಕೊಳ್ಳಬೇಕು ಇದರಿಂದ ಬಡವರಿಗೆ, ರೈತರಿಗೆ, ದುರ್ಬಲ ವರ್ಗಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಿಂದ ರಕ್ಷಣೆ ಪಡೆಯುತ್ತಾರೆ ಎಂದರು.
ಸಾರ್ವತ್ರಿಕ ಆರೋಗ್ಯ ಆಂದೋಲನದ ಪ್ರತಿನಿಧಿಗಳಾದ ಸ್ವಾತಿ, ವೈಶಾಲಿ ಮಾತನಾಡಿ, ಕೋಲಾರ, ಬಿಜಾಪುರ ಮತ್ತು ದಾವಣಗೆರೆಯಲ್ಲಿ ಸರ್ಕಾರಿ ಆಸ್ಪತ್ರೆ ಉಳಿಸಲು ಸಂಘ ಸಂಸ್ಥೆಗಳು ಹೋರಾಟ ಮಾಡುತ್ತಿವೆ ಈಗಿನ ಸರ್ಕಾರ ಧ್ವಂದ್ವ ನಿಲುವಿನಲ್ಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಚಿಂತಕರಾದ ಕೆ.ದೊರೈರಾಜ್ ವಹಿಸಿದ್ದರು, ಪ್ರಾಸ್ತಾವಿಕವಾಗಿ ಡಾ.ಕೆ.ಬಿ.ಓಬಲೇಶ್ ಮಾತನಾಡಿದರು. ಸ್ವಾಗತ ಮತ್ತು ನಿರೂಪಣೆಯನ್ನು ಎ.ನರಸಿಂಹಮೂರ್ತಿ ನೆರವೇರಿಸಿದರು. ವಿವಿಧ ಸಂಘಟನೆಗಳ ಮುಖಂಡರಾದ ಸಿ.ಯತಿರಾಜು, ಬಿ.ಉಮೇಶ್, ಪಂಡಿತ್ ಜವಾಹರ್, ಡಾ.ವೈ.ಕೆ.ಬಾಲಕೃಷ್ಣಪ್ಪ, ಶಿರಾದ ಟೈರ್ ರಂಗನಾಥ್, ಕೊರಟಗೆರೆಯ ಸಿದ್ದಲಿಂಗಸ್ವಾಮಿ, ಎನ್.ಕೆ.ಸುಬ್ರಮಣ್ಯ, ಅನುಪಮಾ, ಕಲ್ಯಾಣಿ, ನಟರಾಜಪ್ಪ, ಅಜ್ಜಪ್ಪ, ಸೈಯದ್ ಅಲ್ತಾಫ್, ಅರುಣ್, ತಿರುಮಲಯ್ಯ, ಸಿದ್ದಲಿಂಗಯ್ಯ, ಕೃಷ್ಣಮೂರ್ತಿ, ಬಿಎಸ್ ಪಿಯ ಜಿಲ್ಲಾಧ್ಯಕ್ಷರಾದ ಆಂಜಿನಪ್ಪ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಒಕ್ಕೊರಲಿನಿಂದ ತುಮಕೂರು ಜಿಲ್ಲಾಸ್ಪತ್ರೆಯನ್ನು ಖಾಸಗೀಕರಣ ಪಿಪಿಪಿ ಮಾದರಿಯಿಂದ ಕೈಬಿಡಲು ಆಗ್ರಹಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


