ಜನರ ಮನೆ ಬಾಗಿಲಿಗೇ ಆಸ್ತಿ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಶೀಘ್ರ ಜಾರಿಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು. ವಿಧಾನಸೌಧದಲ್ಲಿ ಶನಿವಾರ ಬ್ಯಾಂಡ್ ಬೆಂಗಳೂರು ಕುರಿತು ನಡೆದ ಸಂವಾದ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಮಖ್ಯಮಂತ್ರಿಯಾಗಿದ್ದ ಎಸ್. ಎಂ ಕೃಷ್ಣ ಅವರ ಅವಧಿಯಲ್ಲಿ ರೈತರ ಮನೆಬಾಗಿಲಿಗೆ ಪಹಣಿ ನೀಡುವ ‘ಭೂಮಿ’ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಅದೇ ಮಾದರಿಯಲ್ಲಿ ಬೆಂಗಳೂರಿನ ನಾಗರಿಕರಿಗೂ ಸೌಲಭ್ಯ ಕಲ್ಪಿಸಲಾಗುವುದು. ಇದರಿಂದ ಯಾರ ಬಳಿ ಎಷ್ಟು ಆಸ್ತಿ ಇದೆ ಎಂಬ ಮಾಹಿತಿ ಹಾಗೂ ತೆರಿಗೆ ಪಾವತಿಯ ಸ್ಪಷ್ಟ ಚಿತ್ರಣ ದೊರಕಲಿದೆ. ಕಾನೂನು ಪ್ರಕಾರ ತೆರಿಗೆ ಕಟ್ಟುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ತೆರಿಗೆ ವಂಚನೆ ತಡೆಗಟ್ಟಿ, ಆದಾಯ ಸಂಗ್ರಹಕ್ಕೆ ಆದ್ಯತೆ ನೀಡಲಾಗುವುದು. ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಅಗತ್ಯ ಸಂಪನ್ಮೂಲ ಸಂಗ್ರಹಿಸಲಾಗುವುದು ಎಂದರು.
ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಇದುವರೆಗೆ ಸಾರ್ವಜನಿಕರು, ಸಂಘಸಂಸ್ಥೆಗಳಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ವಾರ್ಡ್ ವಾರು ಸಭೆಗಳನ್ನು ಆಯೋಜಿಸಲಾಗುವುದು. ಆ ಮೂಲಕ ಸ್ಥಳೀಯ ನಾಗರಿಕರ ಅಭಿಪ್ರಾಯ ಪಡೆಯಲಾಗುವುದು, ವಿದ್ಯಾರ್ಥಿಗಳ ಸಲಹೆಗಾಗಿ ಪ್ರೌಢಶಾಲೆ, ಕಾಲೇಜುಗಳಲ್ಲಿ ಸಂವಾದ, ಚರ್ಚೆ ಆಯೋಜಿಸಲಾಗುವುದು ಎಂದರು.
ಪಾದಚಾರಿ ಮಾರ್ಗ ತೆರವು ನಗರದ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವಿಗೆ ಕಾರ್ಯಾಚರಣೆ ಆರಂಭಿಸಲಾಗುವುದು, ಬೀದಿಬದಿ ವ್ಯಾಪಾರಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಘನತ್ಯಾಜ್ಯ ಸುಗಮ ನಿರ್ವಹಣೆಗೂ ಒತ್ತು ನೀಡಲಾಗುವುದು. ವಾಹನಗಳು ಘನತ್ಯಾಜ್ಯ ವಿಲೇವಾರಿ ಮಾಡುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಬೆಂಗಳೂರಿನ ಸ್ವಚ್ಛತೆಗೆ ಇದೇ ತಿಂಗಳಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಪ್ಲೆಕ್ಸ್, ಹೋರ್ಡಿಂಗ್ಸ್ ಗಳ ಅಳವಡಿಕೆಗೆ ನೂತನ ಜಾಹೀರಾತು ನೀತಿ ರೂಪಿಸಲಾಗುವುದು ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


