ಬೆಂಗಳೂರು: 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಲು ಗಡುವು ಸಮೀಪಿಸುತ್ತಿದೆ.
ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್(HSRP) ಇಲ್ಲದ ವಾಹನಗಳಿಗೆ ಫೆಬ್ರವರಿ 17 ರಿಂದ ದಂಡ ಹಾಕಲು ಸಾರಿಗೆ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ.
ಹೀಗಿದ್ದರೂ ವಾಹನ ಮಾಲೀಕರು ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಲು ಉದಾಸೀನತೆ ತೋರುತ್ತಿದ್ದು, ಇಂತಹ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಫೆಬ್ರವರಿ 17 ರಿಂದ ದಂಡ ಹಾಕಲು ಸಾರಿಗೆ ಇಲಾಖೆ ತೀರ್ಮಾನಿಸಲಾಗಿದೆ.
ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದರೂ ಇದುವರೆಗೂ ಕೇವಲ 10 ಲಕ್ಷ ವಾಹನಗಳಿಗೆ ಮಾತ್ರ ನಂಬರ್ ಪ್ಲೇಟ್ ಹಾಕಿಸಲಾಗಿದೆ. ಇನ್ನೂ ಭಾರಿ ಸಂಖ್ಯೆಯ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಹಾಕಿಸಿಲ್ಲ. ಗಡುವು ಮುಗಿದ ನಂತರ ವಾಹನಗಳ ಪರಿಶೀಲಿಸಿ ದಂಡ ವಿಧಿಸಲಾಗುವುದು.
ದ್ವಿಚಕ್ರ ವಾಹನಗಳಿಗೆ 390 ರೂ. ನಿಂದ 440 ರೂ., 4 ಚಕ್ರದ ವಾಹನಗಳಿಗೆ 680 ರೂ. ನಿಂದ 690 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸರು ದಂಡ ವಿಧಿಸಲಿದ್ದು, ಮೊದಲ ಸಲ ಸಿಕ್ಕಿ ಬಿದ್ದರೆ 1,000 ರೂ., ಎರಡನೇ ಸಲ ಸಿಕ್ಕಿ ಬಿದ್ದರೆ 2,000 ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಸೂಚಿಸಿದ್ದಾರೆ.


