ತುಮಕೂರು: ಕಳೆದ ಒಂದು ವರ್ಷದಿಂದ ಗೃಹ ಬಂಧನಕ್ಕೆ ಒಳಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸುತ್ತಿದ್ದ ವಯೋವೃದ್ಧೆಯನ್ನು ಪಾರು ಮಾಡಿರೋ ಘಟನೆ ನಡೆದಿದೆ.
ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಮಹಿಳೆಯನ್ನು ಇರಿಸಲಾಗಿತ್ತು.
80 ವರ್ಷದ ವೃದ್ಧೆಯನ್ನು ಕಳೆದ ಒಂದು ವರ್ಷದಿಂದ ಮನೆಯಿಂದ ಹೊರಗೆ ಬಾರದಂತೆ ಮನೆಯ ಒಳಗೆ ಕೂಡಿಹಾಕಿ ಹಿಂಸೆ ನೀಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು.
ಸೊಸೆಯಿಂದ ಕಿರುಕುಳ ಉಂಟಾಗುತ್ತಿರುವ ಮತ್ತು ಮಗನೂ ಕುಡಿದು ಬಂದು ಗಲಾಟೆ ಮಾಡುತ್ತಿರುವ ಬಗ್ಗೆ ವೃದ್ಧೆ ಕೆಲವರ ಬಳಿ ಅಳಲು ತೋಡಿಕೊಂಡಿದ್ದರು. ಯಾರ ಬಳಿಯೂ ಸಹಕಾರ ದೊರೆತಿರಲಿಲ್ಲ.
ನಗರ ಸಾಂತ್ವನ ಕೇಂದ್ರ, ಸಖಿ ಒನ್ ಸ್ಟಾಪ್ ಸೆಂಟರ್, ಹಿರಿಯ ನಾಗರಿಕರ ಸಹಾಯವಾಣಿಗೆ ಕಳೆದ ಐದು ದಿನಗಳ ಹಿಂದೆ ವಿಷಯ ತಲುಪಿದ ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ವಿಳಾಸ ಪತ್ತೆ ಮಾಡಿ ಸ್ಥಳಕ್ಕೆ ತೆರಳಿದ್ದಾರೆ.
ನಿವಾಸಕ್ಕೆ ಭೇಟಿ ನೀಡಿದ ತಂಡ ವೃದ್ಧೆಯನ್ನು ರಕ್ಷಿಸಿ ಕರೆತರಲು ಪ್ರಯತ್ನಿಸಿತು, ಆದರೆ ಕುಟುಂಬದಲ್ಲಿ ಸೊಸೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ನನ್ನನ್ನು ರಕ್ಷಿಸಿ ಕಾಪಾಡಿ ಎಂದು ವೃದ್ಧೆ ಅಂಗಲಾಚಿದ್ದರಿಂದ ಮನೆಯಿಂದ ಹೊರಗೆ ಕರೆತಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಕುಟುಂಬದಲ್ಲಿ ಕಿರುಕುಳ ಇರುವ ಕಾರಣ ವೃದ್ಧೆಯನ್ನು ಅಧಿಕೃತ ಆಶ್ರಯ ತಾಣಕ್ಕೆ ಸೇರಿಸುವ ಪ್ರಯತ್ನ ಪಟ್ಟರು ಸಾಧ್ಯವಾಗಿರಲಿಲ್ಲ. ತನ್ನ ಮನೆಗೆ ಹೋಗಿ ಅಲ್ಲಿಯೇ ಇರುವುದಾಗಿಯೂ, ತನಗೆ ರಕ್ಷಣೆ ಕೊಡಿಸಬೇಕೆಂದು ಮಹಿಳೆಯು ಕೋರಿಕೊಂಡ ಹಿನ್ನೆಲೆಯಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರದ ನೂರುನ್ನೀಸಾ ಅವರು ಪೊಲೀಸರೊಂದಿಗೆ ವೃದ್ಧೆ ವಾಸವಿದ್ದ ಮನೆಗೆ ತೆರಳಿ ಅಲ್ಲಿದ್ದ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿ ವೃದ್ಧೆಯನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ವೃದ್ಧಿಗೆ ಯಾವುದೇ ರೀತಿಯ ಕಿರುಕುಳ ನೀಡಿದರು ಮಗ ಹಾಗೂ ಸೊಸೆ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಹಿಳೆಯು ನಿವೃತ್ತ ಸಿಡಿಪಿಒ ಅಧಿಕಾರಿಯಾಗಿದ್ದು, ಆಕೆಯ ಪತಿಯ ನಿವೃತ್ತ ASI ಆಗಿದ್ದು, ಆಕೆ 54 ಸಾವಿರ ಪೆನ್ಷನ್ ಪಡೆಯುತ್ತಿದ್ದಾರೆ. ಆಕೆಯ ಸ್ವಂತ ದೊಡ್ಡ ಮಗ ಮತ್ತು ಸೊಸೆ ಸೇರಿ ಆಕೆಯನ್ನು ಗೃಹಬಂಧನದಲ್ಲಿ ಇರಿಸಿ ಆಕೆ ಹೊರಗಡೆ ಎಲ್ಲಿಯೂ ಹೋಗದಂತೆ ಬಾಗಿಲಿಗೆ ಬೀಗ ಹಾಕಿದ್ದರು.


