ತುಮಕೂರು: ಜಿಲ್ಲಾ ದಲಿತ–ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಸಾರ್ವತ್ರಿಕ ಆರೋಗ್ಯ ಆಂದೋಲನ–ಕರ್ನಾಟಕ ವತಿಯಿಂದ ರಾಜ್ಯದಲ್ಲಿ 8 ಸರ್ಕಾರಿ ಆಸ್ಪತ್ರೆಗಳನ್ನು ಸರ್ಕಾರ ಪಿಪಿಪಿ ಮಾದರಿಯಲ್ಲಿ ಕೇಂದ್ರದ ನೀತಿ ಆಯೋಗದ ಅವೈಜ್ಞಾನಿಕ ಧೋರಣೆಯಿಂದ ಕಾರ್ಪೊರೇಟ್ ಕಂಪನಿಗಳಿಗೆ ಸರ್ಕಾರಿ ಒಡೆತನದ ಸಾರ್ವಜನಿಕ ಆಸ್ಪತ್ರೆಗಳನ್ನು ಗುತ್ತಿಗೆ ನೀಡುವ ಸಂವಿಧಾನ ವಿರೋಧಿ ನಡೆಯನ್ನು ಖಂಡಿಸಿ, ರಾಜ್ಯದ 28 ಜಿಲ್ಲೆಗಳಲ್ಲಿ ಜಾಥಾ ಅಂಗವಾಗಿ ತುಮಕೂರು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸಂಚಾಲಕರಾದ ಡಾ.ಕೆ.ಬಿ. ಓಬಳೇಶ್ ಮಾತನಾಡಿ ರಾಜ್ಯ ಸರ್ಕಾರ ಬಡವರ ಪರ, ದಲಿತರ ಪರ, ಅಲ್ಪಸಂಖ್ಯಾತರ ಪರ ಎಂದು 5 ಗ್ಯಾರಂಟಿಗಳನ್ನು ಕೊಟ್ಟು ಮತ್ತೊಂದು ಕಡೆ ಬಡವರ ಮೇಲೆ ದುಬಾರಿ ಬೆಲೆಗಳ ಭಾರಿ ಬರೆಯನ್ನು ಹಾಕುವುದು ಒಂದು ಕಡೆಯಾದರೆ ರಾಜ್ಯದಲ್ಲಿ 8 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಕಂಪನಿಗಳ ಮಾಲೀಕತ್ವಕ್ಕೆ ನೀಡಲು ಮುಂದಾಗಿರುವುದು ಜನವಿರೋಧಿ ನಡೆಯಾಗಿದೆ. ಕೂಡಲೇ ಪಿಪಿಪಿ ಮಾದರಿಯ ಖಾಸಗೀಕರಣವನ್ನು ಸರ್ಕಾರ ಕೈಬಿಡಬೇಕು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಔಷಧಿಗಳು ನೀಡಬೇಕು. ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಗುತ್ತಿಗೆ ವೈದ್ಯರನ್ನು ಖಾಯಂಗೊಳಿಸಿ ಸರ್ಕಾರದ ಅಧೀನದಲ್ಲೇ ನಡೆಸಬೇಕು. ಪ್ರಪಂಚದಲ್ಲಿ 73 ದೇಶಗಳಲ್ಲಿ ವೈದ್ಯಕೀಯ ಸೇವೆಗಳ ಹಕ್ಕು ಜಾರಿಯಲ್ಲಿದ್ದು ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯಿದೆಯನ್ನು ಜಾರಿಗೆ ತರುವಲ್ಲಿ ಕರ್ನಾಟಕ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ನಂತರ ಸಾವಿತ್ರಿಬಾಯಿಪುಲೆ ಮಹಿಳಾ ಘಟಕದ ಸಂಚಾಲಕಿ ಅನುಪಮಾ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿಗಳ ಪ್ರಚಾರದಲ್ಲಿ ಮುಳುಗಿದೆ ಎಂದರು.
ಪ್ರತಿಭಟನೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕದ ಅರುಣ್, ತಿರುಮಲಯ್ಯ, ಶಂಕ್ರಯ್ಯ, ಕೃಷ್ಣಮೂರ್ತಿ, ಮುಬಾರಕ್, ತಮಟೆ ಸಂಸ್ಥೆಯ ಸಿದ್ದಗಂಗಯ್ಯ ಬೆಳ್ಳದಮಡು, ಸಿದ್ದರಬೆಟ್ಟದ ಸಿದ್ದಗಂಗಾ ಶಿವಯೋಗಿ ಸ್ವಾಮೀಜಿ, ಬಿಎಸ್ ಪಿ ಪಕ್ಷದ ಅಂಜಿನಮೂರ್ತಿ, ಎನ್ಆರ್ ಹೆಚ್ ಎಸ್ ಸಂಚಾಲಕ ಸತ್ಯಪ್ಪ, ರೈತ ಮುಖಂಡರಾದ ಯೋಗೀಶ್, ರಾಮಕೃಷ್ಣ, ಮಮತಾ, ಸ್ವಾತಿ, ವೈಶಾಲಿ, ನಿವೇಶನ ರಹಿತ ಹೋರಾಟ ಸಮಿತಿಯ ಹನುಮಕ್ಕ, ಗಂಗಾ, ಶಾಂತಮ್ಮ, ಗುಲಾಬ್ ಮುಂತಾದವರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


