ಕೊರಟಗೆರೆ: ತಾಲೂಕು ಪತ್ರ ಬರಹಗಾರರ ಸಂಘದ ಪದಾಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಪತ್ರ ಬರಹಗಾರರಿಗೆ ಭದ್ರತೆಯನ್ನು ನೀಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ತಹಶೀಲ್ದಾರ್ ಕೆ. ಮಂಜುನಾಥ್ ರವರ ಮುಖೇನ ಮನವಿ ಪತ್ರ ಸಲ್ಲಿಸಿ ಪ್ರತಿಭಟಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಟರಾಜ್, ರಾಜ್ಯ ಸರ್ಕಾರವು ಡಿಜಿಟಲೀಕರಣದ ಹೆಸರಿನಲ್ಲಿ ಕಾವೇರಿ 0–1, ಕಾವೇರಿ 0–2 ತಂತ್ರಾಂಶಗಳನ್ನು ಜಾರಿಗೆ ತಂದಿದೆ. ಇದೀಗ ಕಾವೇರಿ 0–3 ತಂತ್ರಾಂಶವನ್ನು ಬರಬಹುದು ಮತ್ತು ಪೆನ್ ಲೆಸ್ ಹಾಗೂ ಪೇಪರ್ ಲೆಸ್ ನೋಂದಣಿಗೆ ಕಾರ್ಯಕ್ಕೆ ಸರ್ಕಾರ ಮುಂದಾಗುತ್ತಿದೆ. ನಮ್ಮ ಪತ್ರ ಬರಹಗಾರರಿಗೆ ಫೆನ್ ಲೆಸ್ ಮತ್ತು ಪೇಪರ್ ಲೆಸ್ ನೋಂದಣಿ ಕಾರ್ಯ ಪ್ರಾರಂಭವಾದಲ್ಲಿ ಪತ್ರ ಬರಹಗಾರರಿಗೆ ಯಾವುದೇ ರೀತಿಯ ಬರವಣಿಗೆ ಕಾರ್ಯ ಇಲ್ಲದಂತಾಗುತ್ತದೆ. ರಾಜ್ಯಾದ್ಯಂತ ಸುಮಾರು 12,000 ಪತ್ರ ಬರಹಗಾರರು ಮತ್ತು ಸಹಾಯಕರು ಇದೇ ವೃತ್ತಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಚಿಂತಿಸದೇ ಅಧಿಕಾರಿಗಳ ಸಲಹೆಯನ್ನು ಪಡೆದು ವಿದೇಶದಲ್ಲಿರುವಂತಹ ಪೆನ್ ಲೆಸ್ ಮತ್ತು ಪೇಪರ್ ಲೆಸ್ ಕಾರ್ಯಕ್ಕೆ ಮುಂದಾಗಿರುವುದು ಎಷ್ಟು ಸರಿ..? ಸರ್ಕಾರಕ್ಕೆ ಒಂದು ವರ್ಷದಿಂದಲೂ ಮನವಿಗಳನ್ನು ನೀಡುತ್ತಲೇ ಬಂದಿದ್ದೇವೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ರವರಿಗೆ ಮೂರು ಬಾರಿ ಖುದ್ದಾಗಿ ಮನವಿ ಸಲ್ಲಿಸಿದರು ಸಹ ನಮ್ಮ ಮನವಿಯನ್ನು ಕಡೆಗಣಿಸಿ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಮಾಡದಿರುವುದರಿಂದ ಸಾವಿರಾರು ಪತ್ರ ಬರಹಗಾರರು ಬೀದಿ ಪಾಲಾಗುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಪತ್ರ ಬರಹಗಾರರ ಮುಖ್ಯ ಬೇಡಿಕೆಗಳು
* ಹೊರ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಸಹ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು
* ನೋಂದಣಿಯಾಗುವ ಎಲ್ಲಾ ದಾಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಮತ್ತು ವಕೀಲರ ಬಿಕ್ಕಲಂ ಕಡ್ಡಾಯಗೊಳಿಸುವುದು.
* ಪತ್ರ ಬರಹಗಾರರಿಗೆ ಸರ್ಕಾರದಿಂದ ಅಧಿಕೃತ ಗುರುತಿನ ಚೀಟಿ ನೀಡುವುದು.
ಕಾವೇರಿ 0.2 ತಂತ್ರಾಂಶದಲ್ಲಿ ಆಗುತ್ತಿರುವ ಮುಖ್ಯ ತೊಂದರೆ ಏನೆಂದರೆ ದಾಸ್ತಾವೇಜನ್ನು ಅಪ್ಲೋಡ್ ಮಾಡುವಾಗ ಆಸ್ತಿಯ ವಿವರಣೆಯಲ್ಲಿ ಬಡಾವಣೆ ಹೆಸರು, ಸರ್ವೆ ನಂಬರ್, ಸೈಟ್ ನಂಬರ್, ಡೋರ್ ನಂಬರ್, ಅಳತೆ ಇರುವುದನ್ನು ನಮೂದಿಸಿ ನೋಂದಣಿ ಮಾಡುತ್ತಿದ್ದೆವು. ಸರ್ಕಾರ ಅಪ್ಲೋಡ್ ನಲ್ಲಿ ನೇರವಾಗಿ ಆಸ್ತಿಯ ವಿವರಣೆ ದಾಖಲಾಗುವಂತೆ ಮತ್ತು ಯಾವುದೇ ತಿದ್ದುಪಡಿ ಮಾಡಲು ಬಾರದಂತೆ ಮಾಡಿದ್ದು, ಆಸ್ತಿ ವಿವರಣೆಯಲ್ಲಿ ಕೇವಲ ಈ ಸ್ವತ್ತು ಸಂಖ್ಯೆ ಮತ್ತು ಅಳತೆ ಬರುವಂತೆ ಮಾಡಿದೆ. ಈ ಸೊತ್ತಿನ ಆಧಾರದ ಮೇಲೆ ಆಸ್ತಿಯನ್ನು ಗುರುತಿಸುವುದು ಕಷ್ಟವಾಗುತ್ತಿದೆ ಸಾರ್ವಜನಿಕರಿಗೆ ಆಸ್ತಿಯ ಅಭದ್ರತೆ ಹೆಚ್ಚಾಗಿ ಕಾಡುತ್ತಿದೆ.
— ಟಿ.ಕೆ.ಮಂಜುನಾಥ್, ಪತ್ರ ಬರಹಗಾರರು. ಕೊರಟಗೆರೆ
ಇ– ಸ್ವತ್ತಿನ ಸಂಖ್ಯೆ ಮತ್ತು ಅಳತೆ ಮಾತ್ರ ಇ ಸಿ ಯಲ್ಲಿ ಬರುವುದರಿಂದ ಕ್ರಾಯಪತ್ರ ದಾನ ಪತ್ರ, ಹಕ್ಕು ಕುಲಾಸೆ, ಪಾಲು ವಿಭಾಗ ಪತ್ರ, ಅದಲು ಬದಲಾವಣೆ ಪತ್ರ, ತಿದ್ದುಪಡಿ ಪತ್ರ, ಕ್ರಯದ ಕರಾರು ಪತ್ರ, ಅಡಮಾನ ಪತ್ರ ಇತರೆ ದಾಸ್ತವೇಜುಗಳ ಪೂರ್ಣ ವಿವರ ಬಾರದೆ ಇರುವುದು ಆಸ್ತಿಯ ಮೇಲೆ ಸಾಲ ಸೌಲಭ್ಯ ಪಡೆಯುವಾಗ ಲೀಗಲ್ ಒಪಿನಿಯನ್ ಕೊಡುವುದು ಕಷ್ಟವಾಗಿದೆ. ಈ ಕಾರಣದಿಂದ ಸಾರ್ವಜನಿಕರು ಸಾಲ ಸೌಲಭ್ಯ ಪಡೆಯಲು ವಂಚಿತರಾಗುತ್ತಿದ್ದಾರೆ.
— ರಾಜಣ್ಣ.ಕಾರ್ಯದರ್ಶಿ, ತಾಲ್ಲೂಕು ಪತ್ರ ಬರಹಗಾರರ ಸಂಘ, ಕೊರಟಗೆರೆ
ಈ ಸಂದರ್ಭದಲ್ಲಿ ಜಿಲ್ಲಾ ದಸ್ತಾವೇಜು ಬರಹಗಾರರಾದ ಪಾರ್ಥ ಸಾರಥಿ, ಶಿವರಾಮಯ್ಯ, ನರಸಿಂಹಮೂರ್ತಿ, ಪ್ರಕಾಶ್, ಪ್ರಭಯ್ಯಾ, ಸತೀಶ್, ಟಿ ಕೆ ಮಂಜುನಾಥ್, ಅನಂತರಾಮ್ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


