ಸರಗೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸದಾಶಿವ ಆಯೋಗದ ವರದಿ ಜಾರಿ ಕುರಿತು ಮಾದಿಗ ಸಂಘಟನೆಯ ಡಾ.ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆಯ ಅಧ್ಯಕ್ಷ ಸಿ.ತಿಮ್ಮಯ್ಯ ಅವರ ನೇತೃತ್ವದಲ್ಲಿ ಶನಿವಾರ ಸಭೆಯನ್ನು ನಡೆಯಿತು.
ಈ ವೇಳೆ ಮಾತನಾಡಿದ ಕೋಟೆ ಮತ್ತು ಸರಗೂರು ತಾಲೂಕಿನ ಡಾಕ್ಟರ್ ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಅಧ್ಯಕ್ಷ ಸಿ.ತಿಮ್ಮಯ್ಯ, ನಮ್ಮ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಸುಮಾರು 101 ಜಾತಿಗಳಿದ್ದು, ಈ ಜಾತಿಗಳಿಗೆ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿಯನ್ನು ನೀಡಿದ್ದು 101 ಜಾತಿಗಳ ಪೈಕಿ ಅತ್ಯಂತ ಹಿಂದುಳಿದ ಜಾತಿ ಮಾದಿಗ ಜಾತಿ. ನಮ್ಮಜಾತಿಯ ಜನಸಂಖ್ಯೆಗೆ ತಕ್ಕಂತೆ ಒಳ ಮೀಸಲಾತಿಯನ್ನು ಜಾರಿಗೆ ತರುವಂತೆ ಸುಮಾರು 35 ವರ್ಷಗಳಿಂದ ರಾಜ್ಯಾದ್ಯಂತ ಆಡಳಿತ ಮಾಡಿದಂತಹ ಸರ್ಕಾರಗಳನ್ನು ಒತ್ತಾಯಿಸಿ ನಾವು ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಆದರೆ, ಆಡಳಿತ ನಡೆಸುವ ಸರ್ಕಾರಗಳು ಕಿವಿ, ಮೂಗು ಕಣ್ಣುಗಳಿಲ್ಲದಂತೆ ತಾತ್ಸಾರ ಹಾಗೂ ಉದಾಸಿನ ಮನೋಭಾವನೆಯಿಂದ ನಡೆದುಕೊಳ್ಳುತ್ತಿದೆ ಎಂದರು.
ಕಳೆದ ಬಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ್ ಬೊಮ್ಮಾಯಿ ರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಾಧುಸ್ವಾಮಿ ಸಮಿತಿ ನೇತೃತ್ವದಲ್ಲಿ ರಾಜ್ಯದಲ್ಲಿ ಆದಿಕರ್ನಾಟಕ ಪರಿಶಿಷ್ಟ ಜಾತಿಯಲ್ಲಿ ಯಾವ ಯಾವ ಸಮಾಜದವರು ಎಷ್ಟೆಷ್ಟು ಜನಸಂಖ್ಯೆ ಇದೆ ಎನ್ನುವುದನ್ನು ಮಾಡಿ ಮೀಸಲಾತಿಯನ್ನು ಹೆಚ್ಚಳ ಮಾಡಿ ನಂತರ ನ್ಯಾಯಮೂರ್ತಿಗಳಾದಂತಹ ಸದಾಶಿವ ಆಯೋಗದ ವರದಿಯಂತೆ ಜನಸಂಖ್ಯೆ ಆಧಾರದ ಮೇಲೆ ಮಾದಿಗ ಸಮಾಜದವರು ಪರಿಶಿಷ್ಟ ಜಾತಿಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ 6% ರಂತೆ ಹೆಚ್ಚು ಜನಸಂಖ್ಯೆ ಇರುವುದನ್ನ ಮೇಲ್ಕಂಡ ಸಮಿತಿಯು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದು, ಇದರ ವರದಿಯನ್ನು ನಮ್ಮ ಸಮಾಜದ ಹೆಸರಾಂತ ವಕೀಲರುಗಳು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಪ್ರಯುಕ್ತ ಸುಪ್ರೀಂಕೋರ್ಟ್ ಈ ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿಯನ್ನು ಆಯಾಯ ರಾಜ್ಯ ಸರ್ಕಾರಗಳು ಜಾರಿಗೆ ತರಬೇಕೆಂದು ಆದೇಶ ಮಾಡಿತ್ತು. ಆದರೆ ನಮ್ಮ ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಜಾರಿ ಮಾಡುತ್ತೇವೆ ಎಂದು ಈ ತಿಂಗಳು ಮುಂದಿನ ತಿಂಗಳು ಎಂದು ಸಾಬೂಬು ಹೇಳಿಕೊಂಡು, ನ್ಯಾಯಮೂರ್ತಿಗಳಾದ ನಾಗ ಮೋಹನದಾಸ್ ನೇತೃತ್ವದಲ್ಲಿ ಜನಗಣತಿಯನ್ನು ಪುನರ್ ಆರಂಭಿಸಿದ್ದು, ಕಳೆದ ಜೂನ್ ತಿಂಗಳ ಗಡುವು ನೀಡಿದ್ದು ಇದುವರೆಗೂ ಇದು ಪೂರ್ಣಗೊಂಡಿಲ್ಲ ಜೊತೆಗೆ ಒಳ ಮೀಸಲಾತಿ ಜಾರಿಯಾಗುವವರೆಗೂ ಬಡ್ತಿ ನೇಮಕಾತಿ ಮಾಡುವುದಿಲ್ಲ ಎಂದು ಹೇಳಿ ಸರ್ಕಾರ ಒಳಗೊಳಗೆ ಬಡ್ತಿ ಮಾಡುತ್ತಿರುವುದು ನಮ್ಮ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಖಂಡಿಸಿ ಸರ್ಕಾರದ ವಿರುದ್ಧ ದಿನಾಂಕ 9–06–2025 ರಂದು ನಮ್ಮ ನ್ಯಾಯಯುತ ಬೇಡಿಕೆಯಾದ ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆಯುವ ಹೋರಾಟಕ್ಕೆ ಕೋಟೆ ಮತ್ತು ಸರಗೂರು ತಾಲೂಕಿನ ಮಾದಿಗ ಸಮುದಾಯದ ಜನರು ಬೆಂಬಲ ನೀಡುತ್ತಿದ್ದು ಕಾರ್ಯಕ್ರಮಕ್ಕೆ ತಪ್ಪದೆ ಸಮುದಾಯದ ಜನರು ಬರಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಡಾಕ್ಟರ್ ಬಾಬು ಜಗಜೀವನ್ ವಿಚಾರ ವೇದಿಕೆ ಅಧ್ಯಕ್ಷ ಸಿ.ತಿಮ್ಮಯ್ಯ, ಎಡತೊರೆ ಸುಭಾಷ್, ಸೋಮು ಪಟೇಲ್, ಎಡತೊರೆ ಮಹೇಶ್, ಮುಳ್ಳೂರು ಸಿದ್ದಪ್ಪ, ಮಾತಂಗ ಜನಜಾಗೃತಿ ವೇದಿಕೆ ಅಧ್ಯಕ್ಷ ಬೂದನೂರು ರವೀಶ್, ಮೊಳೆಯೂರು ನಾಗರಾಜ್, ಕೆ.ಟಿ.ಹರೀಶ್, ಶಿವರಾಜಯ್ಯ, ಶಿವಾಜಿ, ದಿನೇಶ್ , ತಿಮ್ಮರಾಜು,ಸೇರಿದಂತೆ ಹಲವಾರು ಜನ ಸಮುದಾಯದ ಮುಖಂಡರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW


