ತುಮಕೂರು: ವಿಕಲಚೇತನರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.05ರಷ್ಟು ರಾಜಕೀಯ ಮೀಸಲಾತಿ ನೀಡಬೇಕು, ಬಜೆಟ್ ನಲ್ಲಿ ಹೆಚ್ಚುವರಿ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ವತಿಯಿಂದ ಕೈಗೊಂಡಿರುವ ಬೆಂಗಳೂರು ಚಲೋ ಬೈಕ್ ರ್ಯಾಲಿ ಫೆ.22 ರಂದು ತುಮಕೂರು ನಗರಕ್ಕೆ ಆಗಮಿಸಲಿದೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಟಿ.ಎಸ್.ಮಂಜುಳ ತಿಳಿಸಿದರು.
ಚಿಕ್ಕಪೇಟೆಯಲ್ಲಿರುವ ಪರಿವರ್ತನಾ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಮೀಸಲಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಫೆ.19 ರಂದು ಬಸವನ ಬಾಗೇವಾಡಿಯ ಕೂಡಲ ಸಂಗಮದಿಂದ ಹೊರಟ ಅಂಗವಿಕಲರ ಬೈಕ್ ರ್ಯಾಲಿ, ಫೆ.22ಕ್ಕೆ ತುಮಕೂರು ನಗರವನ್ನು ತಲುಪಲಿದೆ. ಸಿದ್ಧಗಂಗಾ ಮಠದಲ್ಲಿ ವಾಸ್ತವ್ಯ ಹೂಡಿ, ಫೆ.23ರಂದು ತುಮಕೂರಿನಿಂದ ಹೊರಟು, ಸಂಜೆ ವೇಳೆಗೆ ಫ್ರೀಡಂಪಾರ್ಕ್ ತಲುಪಿ, ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ ಎಂದರು.
ಇಂದಿನ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಅಂಗವಿಕಲರ ಮಾಶಾಸನ ಹೆಚ್ಚಳ, ಗ್ರಾಮೀಣ ಭಾಗದಲ್ಲಿ ಅಂಗವಿಕಲರ ಪುನರ್ ವಸತಿಗಾಗಿ ದುಡಿಯುತ್ತಿರುವ ವಿಆರ್’ಡಬ್ಲ್ಯು, ಎಂಆರ್ ಡಬ್ಲ್ಯುಗಳ ಗೌರವಧನ ಹೆಚ್ಚಳ, ಕನಿಷ್ಠ ವೇತನ ಜಾರಿ, ಆರೈಕೆದಾರರ ಪ್ರೋತ್ಸಾಹಧನ ವಿಸ್ತರಣೆ, ತಮಿಳುನಾಡು ಸರ್ಕಾರದ ರೀತಿ ಕರ್ನಾಟಕದಲ್ಲಿಯೂ ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು. ಆಗ ಮಾತ್ರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯಕ್ಕೆ ಬೆಲೆ ಸಿಕ್ಕಂತಾಗುತ್ತದೆ ಎಂದು ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಬಾಬು ಮಾತನಾಡಿ, ಫೆ.19ರಂದು ಕೂಡಲ ಸಂಗಮದಿಂದ ಹೊರಟಿರುವ ವಿಕಲಚೇತನರಿಗೆ ಬೈಕ್ ರ್ಯಾಲಿ ಫೆ.22 ರಂದು ತುಮಕೂರು ನಗರ ಪ್ರವೇಶಿಸಿ, ಸಂಜೆ ಸಿದ್ಧಗಂಗಾ ಮಠದಲ್ಲಿ ತಂಗಲಿದೆ. ಬೆಳಿಗ್ಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿ, ಫ್ರೀಡಂಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ಆರಂಭಿಸಲಿದ್ದೇವೆ. ಸರ್ಕಾರದ ಪ್ರತಿನಿಧಿಗಳು ಬಂದು ನಮ್ಮ ಅಹವಾಲು ಆಲಿಸುವವರೆಗೆ ಈ ಹೋರಾಟ ಮುಂದುವರೆಯಲಿದೆ. ತುಮಕೂರಿನಿಂದ ಸುಮಾರು 200 ಜನರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದರು.
ಈ ವೇಳೆ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಪದಾಧಿಕಾರಿಗಳಾದ ಬಿ.ರವೀಂದ್ರ, ಮುಜೀಬ್, ನಂಜಾಚಾರಿ, ಭಾಗ್ಯಲಕ್ಷ್ಮಿ ಹಾಗೂ ಗಂಗರಾಜು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


