ತುಮಕೂರು: ಗುಬ್ಬಿ ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಜ್ಯಹೆದ್ದಾರಿ 84ರಲ್ಲಿ ಕಸಬಾ ಹೋಬಳಿ ಜಿ.ಹೊಸಹಳ್ಳಿ ಸಮೀಪ ನಿರ್ಮಿಸಿರುವ ಟೋಲ್ ಸಂಗ್ರಹ ಕೇಂದ್ರವು ಅವೈಜ್ಞಾನಿಕವಾಗಿದೆ. ಇದನ್ನು ತೆರವುಗೊಳಿಸಬೇಕು ಎಂದು ಸೋಮವಾರ ರೈತ ಸಂಘ, ಸ್ಥಳೀಯ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಸಾರ್ವಜನಿಕರ ತೆರಿಗೆ ಹಣದಿಂದಲೇ ರಸ್ತೆ ನಿರ್ಮಿಸಲಾಗಿದ್ದರೂ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಕಾರಣಕ್ಕಾಗಿ ಟೋಲ್ ಸಂಗ್ರಹ ಕೇಂದ್ರ ಸ್ಥಾಪಿಸಿರುವುದು ದುರದೃಷ್ಟಕರ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಟೋಲ್ ಸಂಗ್ರಹ ಕೇಂದ್ರ ನಿರ್ಮಿಸಿದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಕ್ರಮಕೈಗೊಳ್ಳದೆ ಇರುವುದು ಖಂಡನೀಯ. ಅಧಿಕಾರಿಗಳು ರೈತರ ಮನವಿಗೆ ಬೆಲೆ ನೀಡದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಸರ್ಕಾರದ ಮೇಲೆ ಒತ್ತಡ ಹಾಕಿ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಬೇಕು. ಅಧಿಕಾರಿಗಳು ಹಾಗೂ ಶಾಸಕರು ಸ್ಥಳೀಯರ ಸಮಸ್ಯೆಗಳಿಗೆ ಕಿವಿಗೊಡದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುತ್ತೇವೆ. ಪ್ರತಿಭಟನೆ ನಡೆಸುವುದು ಜನಸಾಮಾನ್ಯರ ಹಕ್ಕು.ಇದನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್, ಮೇಲಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಆಗುವವರೆಗೂ ಸ್ಥಳೀಯ ಸಿಬ್ಬಂದಿ ಟೋಲ್ ಸಂಗ್ರಹ ಮಾಡಬಾರದು. ಅಂತಿಮ ತೀರ್ಮಾನವಾಗುವವರೆಗೆ ಟೋಲ್ ಸಂಗ್ರಹಿಸಿದಲ್ಲಿ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ, ಲೋಕೇಶ್, ಎಸ್.ಡಿ ದಿಲೀಪ್ ಕುಮಾರ್, ಕಳ್ಳಿಪಾಳ್ಯ ಲೋಕೇಶ್, ಬಿ.ಎಸ್.ನಾಗರಾಜು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



