ತುಮಕೂರು: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಒತ್ತಾಯಿಸಿ ದಿನಾಂಕ 01.01.2026 ರಂದು ವಿಜಯಪುರ ಉಸ್ತುವಾರಿ ಸಚಿವರ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಕಾಮ್ರೆಡ್ ಭಗವಾನ್ ರೆಡ್ಡಿ ಸೇರಿದಂತೆ ಹಲವಾರು ನಾಯಕರುಗಳನ್ನು ಬಂಧಿಸಿ, ಕೊಲೆ ಯತ್ನ ಮುಂತಾದ ಕರಾಳ ಸುಳ್ಳು ಮೊಕದ್ದಮೆಗಳನ್ನು ಹೂಡಿ, ನ್ಯಾಯಾಂಗ ಬಂಧನದಲ್ಲಿಟ್ಟಿರುವುದನ್ನು ವಿರೋಧಿಸಿ ತಿಪಟೂರು ತಾಲೂಕು ತಹಶೀಲ್ದಾರ ಕಚೇರಿಯ ಮುಂದೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ (ಎಐಕೆಕೆಎಂಎಸ್) ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಗೃಹ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ನಾಯಕರಲ್ಲೊಬ್ಬರಾದ ಕಾಮ್ರೇಡ್ ಎಸ್. ಎನ್. ಸ್ವಾಮಿ ಮಾತನಾಡಿ, ನ್ಯಾಯಕ್ಕಾಗಿ, ಜನರ ಹಿತಾಸಕ್ತಿಗಾಗಿ ಹೋರಾಟವನ್ನು ನಡೆಸುವ ಹೋರಾಟಗಾರರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಳ್ಳು ಮೊಕದ್ದಮೆಗಳನ್ನು ಹೂಡಿ ಚಳುವಳಿಗಳನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಫ್ಯಾಸಿಸ್ಟ್ ನಡೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ. ಕಳೆದ ನೂರಕ್ಕೂ ಹೆಚ್ಚು ದಿನಗಳಿಂದ ವಿಜಯಪುರದಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ಖಾಸಗಿಯವರ ಮಡಿಲಿಗೆ ಒಪ್ಪಿಸಿ, ನೂರಾರು ಎಕ್ರೆ ಜಮೀನನ್ನು ಖಾಸಗಿಯವರಿಗೆ ಪರಬಾರೆ ಮಾಡಿ, ವೈದ್ಯಕೀಯ ಕಾಲೇಜನ್ನು ತೆರೆದು, ಯಥೇಚ್ಛ ಲಾಭಗಳಿಸಲು ಅನುವು ಮಾಡಿಕೊಡುವ ಸರ್ಕಾರದ ಕ್ರಮವನ್ನು ವಿರೋಧಿಸಿ, ಸರ್ಕಾರಿ ಕಾಲೇಜನ್ನು ಸ್ಥಾಪಿಸಲು ಒತ್ತಾಯಿಸಿ ಹೋರಾಟ ನಡೆಯುತ್ತಿತ್ತು. ಜನದ ಮೂಲಭೂತ ಹಕ್ಕಾದ ಆರೋಗ್ಯದ ಹಕ್ಕನ್ನು ಕಾಪಾಡಿ, ದುಬಾರಿಯಾಗುತ್ತಿರುವ ವೈದ್ಯಕೀಯ ಖರ್ಚು ವೆಚ್ಚವನ್ನು ತಗ್ಗಿಸಿ, ಜನರಿಗೆ ಆರೋಗ್ಯವನ್ನು ಖಚಿತ ಪಡಿಸಬೇಕಾದ ಪ್ರಜಾಪ್ರಭುತ್ವವಾದಿ ಸರ್ಕಾರವು ನ್ಯಾಯ ಕೇಳುವವರ ದನಿಯನ್ನು ಅಡಗಿಸಲು ಫ್ಯಾಸಿಸ್ಟ್ ನೀತಿಯನ್ನು ಅನುಸರಿಸುತ್ತಿದೆ ಇದು ಸರ್ಕಾರಗಳ ಕಾರ್ಪೊರೇಟ್–ಖಾಸಗಿಕರಣ ಪರ ನೀತಿಯನ್ನು ಅನುಸರಿಸಲು ನಡೆಸುತ್ತಿರುವ ದಬ್ಬಾಳಿಕೆಯ ಕ್ರಮ ಎಂದರು.
ಅಂದಿನ ಹೋರಾಟದ ಚಿತ್ರಗಳನ್ನು ನೋಡಿದರೆ, ಕೊಲೆ ಪ್ರಯತ್ನದ ಮೊಕದ್ದಮೆ ಹೂಡಿರುವುದು ಯಾರಿಗಾದರೂ ಹಾಸ್ಯಾಸ್ಪದವೆನ್ನುತ್ತದೆ. ಬರಿಗೈಲಿ ನಿಂತು ಪ್ರತಿಭಟಿಸುತ್ತಾ, ಪೊಲೀಸರಿಂದ ಬಲವಂತವಾಗಿ ಬಂಧಿತರಾದವರು, ಯಾವ ಕೊಲೆ, ಯಾರ ಕೊಲೆ, ಯಾತಕ್ಕಾಗಿ ಕೊಲೆ ಪ್ರಯತ್ನ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಪಟ್ಟಭದ್ರ ಹಿತಾಸಕ್ತಿ ಗಳಿಗಾಗಿ ತೆಗೆದುಕೊಳ್ಳುತ್ತಿರುವ ಈ ಫ್ಯಾಸಿವಾದಿ ಕ್ರಮಗಳನ್ನು ರಾಜ್ಯ ಸರ್ಕಾರ ಕೂಡಲೇ ಕೈ ಬಿಟ್ಟು ನ್ಯಾಯಕ್ಕಾಗಿ ಹೋರಾಡುವವರನ್ನು ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿನ ಎಲ್ಲ ಮುಖದಮೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ತಾಲೂಕು ಉಪಾಧ್ಯಕ್ಷರಾದ ಕಾರ್ಯದರ್ಶಿಗಳಾದ ಪ್ರಶಾಂತ್ ಹಾಲ್ಕುರಿಕೆ, ಜಂಟಿ ಕಾರ್ಯದರ್ಶಿಗಳಾದ ಪ್ರಸನ್ನ ಹಾಲೇನಹಳ್ಳಿ, ಪಾರ್ವತಮ್ಮ, ಚಂದ್ರಶೇಖರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


