ಬೀದರ್: ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಸವಕಲ್ಯಾಣ ಶಾಸಕ ಶರಣು ಸಲಗರ್ ಅವರ ನೇತೃತ್ವದಲ್ಲಿ ಬಸವಕಲ್ಯಾಣ ನಗರದಲ್ಲಿ ರೈತರು ಅರೆಬೆತ್ತಲೆ ಪ್ರತಿಭಟನೆ ಮಾಡಿದರು.
ವಿವಿಧ ಹಳ್ಳಿಗಳಿಂದ ಆಗಮಿಸಿದ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅರೆ ಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾ ಮೆರವಣಿಗೆಯು ಬಸವಕಲ್ಯಾಣದ ಮಹಾತ್ಮ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ನಡೆಯಿತು. ಪ್ರತಿಭಟನೆಯಲ್ಲಿ ಶಾಸಕ ಶರಣು ಸಲಗರ್ ಅವರು ಬಾರುಕೋಲಿನಿಂದ ಹೊಡೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು
ಮಳೆಯಿಂದ ಹಾನಿಯಾದ ತೊಗರಿಯ ಬೆಳೆಯನ್ನು ಹಿಡಿದುಕೊಂಡು, ಮುಖ್ಯಮಂತ್ರಿ ಮತ್ತು ಸಚಿವರ ವೇಷ ಧರಿಸಿಕೊಂಡು ಬಾರುಕೋಲಿನಿಂದ ಹೊಡೆದುಕೊಳ್ಳುತ್ತಾ ಪ್ರತಿಭಟನೆ ಮಾಡಲಾಯಿತು. ಈ ಸಮಯದಲ್ಲಿ ರೈತರ ಹಾಗೆ ಲುಂಗಿ, ತಲೆಗೆ ಶಾಲು ಕಟ್ಟಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ ಶರಣು ಸಲಗರ್ ಬಾರುಕೋಲಿನಿಂದ ಮೈಯಲ್ಲ ಹೊಡೆದುಕೊಂಡು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಶರಣು ಸಲಗರ್, ರಾಜ್ಯ ಸರ್ಕಾರಕ್ಕೆ ಅನ್ನದಾತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಯಾವೊಬ್ಬ ಸಚಿವರು ರೈತರ ಜಮೀನಿಗೆ ಕಾಲಿಟ್ಟು ಸಮೀಕ್ಷೆ ನಡೆಸಿಲ್ಲ. ಬಡ ರೈತರು ತುತ್ತು ಅನ್ನಕ್ಕಾಗಿ ಮಕ್ಕಳನ್ನು ಮಾರಾಟ ಮಾಡುತ್ತಿದ್ದಾರೆ. ಪ್ರಕೃತಿ ವಿಕೋಪದಿಂದ ಬೆಂಗಳೂರು, ಮುಂಬೈ ನಗರಕ್ಕೆ ವಲಸೆ ಹೊಗುತ್ತಿದ್ಧಾರೆ. ನಮ್ಮ ಮಂತ್ರಿಗಳು, ಶಾಸಕರು ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದರು.
ಕಲ್ಯಾಣ ಕರ್ನಾಟಕದ ಅನ್ನದಾತರು ತುಂಬಾ ಸಂಕಷ್ಟದಲ್ಲಿದ್ದಾರೆ. ಮಹಾರಾಷ್ಟ್ರದ ಸರಕಾರದ ಮಾದರಿಯಲ್ಲಿ ನೀವು ಪರಿಹಾರ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ನಮ್ಮ ಪ್ರತಿಭಟನೆಗೆ ಸ್ಪಂದಿಸದಿದ್ದರೆ, ನಿಮ್ಮನ್ನು ದೇವರು ಸಹ ಕ್ಷಮಿಸುವುದಿಲ್ಲ. ಮುಂದಿನ ಚುನಾವಣೆಯಲ್ಲಿ ನಿಮ್ಮ ಸರ್ಕಾರ ಖಂಡಿತವಾಗಿ ಬೀಳುತ್ತದೆ ಎಂದು ಆಕ್ರೊಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC